*ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ವಾದಕ ಇನ್ನಿಲ್ಲ*: *ಸಂಗೀತ ಲೋಕದಲ್ಲಿ ಶೋಕದ ಅಲೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದ ಹಿನ್ನೆಲೆ ಸಂಗೀತಕ್ಕೆ ತಮ್ಮ ಗಿಟಾರ್ ನಾದದ ಮೂಲಕ ವಿಶೇಷ ಮೆರುಗು ನೀಡುತ್ತಿದ್ದ ಖ್ಯಾತ ಗಿಟಾರ್ ವಾದಕ ಡಿ. ಶ್ರೀನಿವಾಸ್ ಆಚಾರ್ ನಿಧನರಾಗಿದ್ದಾರೆ. ಅವರ ಹಠಾತ್ ಅಗಲಿಕೆ ಸಂಗೀತ ಲೋಕ ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖ ಮೂಡಿಸಿದೆ.
ಕಳೆದ ಹಲವು ವರ್ಷಗಳಿಂದ ‘ಸರಿಗಮಪ’ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ ವಾದಕರಾಗಿ ಶ್ರೀನಿವಾಸ್ ಆಚಾರ್ ಸೇವೆ ಸಲ್ಲಿಸಿದ್ದರು. ತಮ್ಮ ಅದ್ಭುತ ವಾದನ ಕೌಶಲ್ಯದ ಮೂಲಕ ಅಪಾರ ಸಂಗೀತ ಪ್ರೇಮಿಗಳ ಮನಗೆದ್ದಿದ್ದರು.
ವಿಶೇಷವಾಗಿ ‘ಸರಿಗಮಪ’ ವೇದಿಕೆಯಲ್ಲಿ ನೂರಾರು ಬಾಲ ಪ್ರತಿಭೆಗಳು ಹಾಗೂ ಯುವ ಗಾಯಕರು ಹಾಡುವಾಗ ಗಿಟಾರ್ ನಾದದ ಮೂಲಕ ಗಾಯನಕ್ಕೆ ಮತ್ತಷ್ಟು ಮೆರುಗು ನೀಡುತ್ತಿದ್ದರು. ಸ್ಪರ್ಧಿಗಳ ಗಾಯನಕ್ಕೆ ಬೆನ್ನೆಲುಬಾಗಿ ನಿಂತು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದ ಅವರ ಕೊಡುಗೆ ಅಪಾರವಾಗಿತ್ತು.
ಶ್ರೀನಿವಾಸ್ ಆಚಾರ್ ಅವರ ನಿಧನಕ್ಕೆ ಖ್ಯಾತ ಕಂಜೀರಾ ವಾದಕ ಅಮೃತ್ ಸೇರಿದಂತೆ ಹಲವು ಹಿರಿಯ ಸಂಗೀತ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಝೀ ಕನ್ನಡ ವಾಹಿನಿಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ತಮ್ಮ ನಗುಮುಖ ಹಾಗೂ ಮನಮೋಹಕ ಗಿಟಾರ್ ವಾದನದ ಮೂಲಕ ಸಂಗೀತ ಪ್ರೇಮಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಶ್ರೀನಿವಾಸ್ ಆಚಾರ್ ಅವರ ಅಗಲಿಕೆ ಕನ್ನಡ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಂಗೀತ ಸೇವೆ ಸದಾ ಸ್ಮರಣೀಯ.


