
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಮೊದಲು ತಮಗೆ ಜನಿಸಿದ್ದ ಮಗುವಿನ ಬಗ್ಗೆ ಪ್ರಸ್ತಾಪಿಸಿ ಭಾವುಕರಾಗಿದ್ದಾರೆ.
ಅವರು ತಮ್ಮ ಆತ್ಮಕಥೆ ‘Belonging: A Journey of Love’ ಪುಸ್ತಕದಲ್ಲಿ ಹಲವಾರು ವಿಚಾರಗಳನ್ನು ಬರೆದುಕೊಂಡಿದ್ದು, ತಮ್ಮ ಮೊದಲ ಮಗುವಿನ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಗೆ ರಾಹುಲ್ ಗಾಂಧಿಗೂ ಮುನ್ನ ಮಗುವೊಂದು ಜನಿಸಿತ್ತು. ಆದರೆ, ಆ ಮಗು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು ಎಂಬ ವಿಚಾರವನ್ನು ಸೋನಿಯಾ ಗಾಂಧಿ ಅವರು ತಿಳಿಸಿದ್ದಾರೆ. ‘ನಾವು ಮೊದಲ ಮಗುವನ್ನು ತುಂಬಾ ಪ್ರೀತಿಸುತ್ತಿದ್ದೆವು.. ಆದರೆ, ಹುಟ್ಟಿದ ಕೆಲವೇ ಹೊತ್ತಲ್ಲಿ ನಮ್ಮ ಮೊದಲ ಮಗು ಮೃತಪಟ್ಟಿತು’ ಎಂದು ಬರೆದುಕೊಂಡಿದ್ದಾರೆ.
1969ರ ಜನವರಿಯಲ್ಲಿ ಈ ದುರಂತ ಸಂಭವಿಸಿತು. ತಮ್ಮ ಮೊಮ್ಮಗು ಮೃತಪಟ್ಟ ವಿಷಯ ತಿಳಿದ ಇಂದಿರಾ ಗಾಂಧಿ ಅವರು ಸೊಸೆ ಸೋನಿಯಾರನ್ನು ಅಪ್ಪಿಕೊಂಡು ಸಂತೈಸಿದ್ದರು. ಮನೆಯಲ್ಲಿ ಮೊದಲ ಮಗುವಿನ ಆಗಮನದ ಸಂಭ್ರಮ ಮನೆ ಮಾಡಿತ್ತು. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ನಿಗದಿತ ದಿನಾಂಕಕ್ಕಿಂತ 2 ತಿಂಗಳ ಮೊದಲೇ ಸೋನಿಯಾ ಗಾಂಧಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. 1969ರ ಜ.18 ರಂದು ಸೋನಿಯಾ ಗಂಡು ಮಗುವಿಗೆ ಜನ್ಮ ನೀಡಿದರು. ಅಕಾಲಿಕವಾಗಿ ಜನಿಸಿದ್ದರೂ, ಆ ನವಜಾತ ಶಿಶು ಆರೋಗ್ಯವಾಗಿಯೇ ಇತ್ತು.
‘ಮಗುವನ್ನು ಇನ್ಕ್ಯುಬೇಟರ್ನಲ್ಲಿ ಇರಿಸಿದಾಗ ಅದರ ಮೊದಲ ಅಳು ನನಗೆ ಕೇಳಿಸಿತು. ನಂತರ ರಾಜೀವ್ ನನ್ನನ್ನು ಆ ಮಗುವನ್ನು ನೋಡಲು ಕರೆದೊಯ್ದರು. ಮುದ್ದು ಮಗನನ್ನು ನೋಡಿದ ತಕ್ಷಣವೇ ನಾವು ಪ್ರೀತಿಯಲ್ಲಿ ಬಿದ್ದೆವು. ಆದರೆ, ಮಗು ಬದುಕಿದ್ದು ಕೆಲವೇ ಗಂಟೆಗಳು ಮಾತ್ರ. ಮಗು ಬದುಕುಳಿಯುವ ಸಾಧ್ಯತೆ ಅನಿಶ್ಚಿತವಾಗಿದೆ ಎಂದು ವೈದ್ಯರು ರಾಜೀವ್ ಗಾಂಧಿ ಅವರಿಗೆ ಮೊದಲೇ ಎಚ್ಚರಿಸಿದ್ದರು. ‘ಇಲ್ಲ, ಇದು ಸಾಧ್ಯವೇ ಇರಲಿಲ್ಲ! ‘ಏಕೆ, ಏಕೆ?’ ಎಂದು ನಾನು ಪದೇಪದೇ ಕೇಳುತ್ತಿದ್ದೆ. ನಾವಿಬ್ಬರೂ ಆಘಾತಕ್ಕೊಳಗಾದೆವು. ನಮ್ಮ ಹೃದಯ ಚೂರಾಯಿತು ಎಂದು ಸೋನಿಯಾ ನೋವು ವ್ಯಕ್ತಪಡಿಸಿದ್ದಾರೆ.
ಮೊದಲ ಮಗನನ್ನು ಕಳೆದುಕೊಂಡು ರಾಜೀವ್ ಗಾಂಧಿ ಕಣ್ಣೀರು ಹಾಕಿದ್ದರು. ಆ ಸಂದರ್ಭದಲ್ಲಿ ವಿದೇಶಿ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು. ಅವರು ಕೂಡ ದುಃಖಿತರಾಗಿದ್ದರು ಎಂದು ಬರೆದುಕೊಂಡಿದ್ದಾರೆ.




