*ಮೃತ ಮಗುವನ್ನು ನದಿಗೆ ಬಿಡಲು ಸುತಾರಾಂ ಒಪ್ಪದ ಸೋನಿಯಾ*:* ಕೊನೆಗೆ ರಾಜೀವ್ ಮಾಡಿದ್ದೇನು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಯ ಬದುಕಿನಲ್ಲಿ ಮರೆಯಲಾಗದ ನೋವಿನ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ತಮ್ಮ ಮೊದಲ ಮಗುವನ್ನು ಕಳೆದುಕೊಂಡ ದುಃಖವನ್ನು ಸೋನಿಯಾ ಮೊದಲ ಬಾರಿಗೆ ಆತ್ಮಕಥನದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಅಂತಿಮ ಕ್ಷಣಗಳ ನೆನಪುಗಳನ್ನು ಓದುಗರ ಮುಂದಿಟ್ಟಿದ್ದಾರೆ.
ತಮ್ಮ ಆತ್ಮಕಥನ *‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’*ನಲ್ಲಿ 1969ರಲ್ಲಿ ನಡೆದ ಈ ಘಟನೆಗಳನ್ನು ಸೋನಿಯಾ ವಿವರಿಸಿದ್ದಾರೆ. 1969ರ ಜನವರಿ 18ರಂದು ನಿಗದಿತ ಹೆರಿಗೆ ದಿನಾಂಕಕ್ಕಿಂತ ಎರಡು ತಿಂಗಳು ಮೊದಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ಮಗು ಹೆಚ್ಚು ಹೊತ್ತು ಬದುಕುಳಿಯಲಿಲ್ಲ.
ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇರಿಸಿದಾಗ ಅದರ ಮೊದಲ ಅಳುವಿನ ಧ್ವನಿ ಕೇಳಿಸಿತ್ತು. ಬಳಿಕ ರಾಜೀವ್ ತಮ್ಮನ್ನು ಮಗುವನ್ನು ನೋಡಲು ಕರೆದೊಯ್ದಿದ್ದರು. ಪುಟ್ಟದಾಗಿದ್ದರೂ ಸಂಪೂರ್ಣವಾಗಿ ರೂಪುಗೊಂಡಿದ್ದ ಮಗು, ದಟ್ಟ ಕಪ್ಪು ಕೂದಲು ಮತ್ತು ಉದ್ದನೆಯ ತೆಳುವಾದ ಬೆರಳುಗಳನ್ನು ಹೊಂದಿತ್ತು. ಮೊದಲ ನೋಟದಲ್ಲೇ ಮಗುವಿನ ಮೇಲೆ ಅಪಾರ ಪ್ರೀತಿ ಮೂಡಿತ್ತು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.
ಆದರೆ ಮರುದಿನ ಬೆಳಿಗ್ಗೆ 6.30ರ ಸುಮಾರಿಗೆ ಮಗು ಕೊನೆಯುಸಿರೆಳೆದಿತ್ತು. ಈ ವಿಷಯವನ್ನು ರಾಜೀವ್ ನಿಧಾನವಾಗಿ ತಿಳಿಸಿದಾಗ, ತಮಗೆ ಆಘಾತವಾಗಿತ್ತು. ಇಬ್ಬರೂ ಪರಸ್ಪರ ಅಪ್ಪಿಕೊಂಡು ಕಣ್ಣೀರಿಟ್ಟಿದ್ದೆವು. ಸದಾ ಭಾವನೆಗಳನ್ನು ನಿಯಂತ್ರಿಸಿಕೊಳ್ಳುತ್ತಿದ್ದ ರಾಜೀವ್ ಕೂಡ ಅಂದು ಕಣ್ಣೀರು ಹಾಕಿದ್ದರು ಎಂದು ಸೋನಿಯಾ ಬರೆದಿದ್ದಾರೆ.
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು. ದುಃಖದಲ್ಲಿದ್ದ ದಂಪತಿಯನ್ನು ಅಪ್ಪಿಕೊಂಡು ಬಹಳ ಹೊತ್ತು ಅವರೊಂದಿಗೆ ಕುಳಿತಿದ್ದರು. ತಾವು ಅವರ ಜೊತೆಯಲ್ಲೇ ಇರಬೇಕೆಂದಿದ್ದರೂ ಪ್ರವಾಸದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಹೇಳಿ ಮರುದಿನ ಹೊರಟಿದ್ದರು.
ಇನ್ನು ಮಗುವಿನ ಅಂತ್ಯಕ್ರಿಯೆ ಹೇಗೆ ನಡೆಸಬೇಕು ಎಂಬ ಪ್ರಶ್ನೆ ಎದುರಾಗಿತ್ತು. ನವಜಾತ ಶಿಶುವಿನ ಮೃತದೇಹವನ್ನು ನದಿಗೆ ಬಿಡುವ ಸಂಪ್ರದಾಯದ ಬಗ್ಗೆ ಸೋನಿಯಾಗೆ ಒಪ್ಪಿಗೆಯಿರಲಿಲ್ಲ. ಹಿಂದೆ ಓಖ್ಲಾ ಬ್ಯಾರೇಜ್ ಬಳಿ ನದಿಯಲ್ಲಿ ತೇಲಿಬಂದ ಮೃತದೇಹವೊಂದನ್ನು ಬೀದಿ ನಾಯಿಗಳು ಎಳೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ಅವರ ಮನಸ್ಸಿಗೆ ನಾಟಿತ್ತು. ತಮ್ಮ ಮಗುವಿಗೂ ಅಂತಹ ಸ್ಥಿತಿ ಬರಬಾರದು ಎಂದು ಅವರು ಕಣ್ಣೀರಿಟ್ಟಿದ್ದರು.
ಕೊನೆಗೆ ಮೆಹ್ರೌಲಿಯಲ್ಲಿದ್ದ ಫಿರೋಜ್ ಗಾಂಧಿ ಅವರ ತೋಟದ ಮನೆಯಲ್ಲಿ ಮಗುವನ್ನು ಸಮಾಧಿ ಮಾಡಲು ನಿರ್ಧರಿಸಲಾಯಿತು. ರಾಜೀವ್ ಮತ್ತು ಸಂಜಯ್ ಗಾಂಧಿ ಸೇರಿ ಸುಂದರವಾಗಿ ಅರಳಿದ್ದ ಗುಲಾಬಿ ಬಣ್ಣದ ಬೌಗೆನ್‌ವಿಲ್ಲಾ ಗಿಡದ ಕೆಳಗೆ ಮಗುವನ್ನು ಹೂತುಬಂದಿದ್ದರು. ನಂತರ ಹಲವು ದಿನಗಳವರೆಗೆ ಅಲ್ಲಿಗೆ ಹೋದಾಗಲೆಲ್ಲ ಆ ಸ್ಥಳದಲ್ಲಿ ಹೂವೊಂದನ್ನು ಇಟ್ಟು ಬರುತ್ತಿದ್ದೆವು ಎಂದು ಸೋನಿಯಾ ಸ್ಮರಿಸಿದ್ದಾರೆ.
ಮೊದಲ ಮಗುವನ್ನು ಕಳೆದುಕೊಂಡ ಆಘಾತದಿಂದ ತಾವು ದೀರ್ಘಕಾಲ ಖಿನ್ನತೆಗೆ ಒಳಗಾಗಿದ್ದೆ. ಅಸಮರ್ಥಳು ಮತ್ತು ತಪ್ಪಿತಸ್ಥಳು ಎಂಬ ಭಾವನೆ ಕಾಡುತ್ತಿತ್ತು ಎಂದೂ ಅವರು ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಗುವಿನ ಸಾವಿನ ಬಗ್ಗೆ ಅವಹೇಳನಕಾರಿ ಲೇಖನವೊಂದು ಪ್ರಕಟವಾಗಿದ್ದು, ತಮ್ಮ ನೋವನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದು ತಿಳಿಸಿದ್ದಾರೆ.
ಕಾಲಕ್ರಮೇಣ ದಂಪತಿ ಈ ದುಃಖದಿಂದ ಹೊರಬರಲು ಪ್ರಯತ್ನಿಸಿದರು. 1969ರ ಅಕ್ಟೋಬರ್‌ನಲ್ಲಿ ಸೋನಿಯಾ ಮತ್ತೊಮ್ಮೆ ಗರ್ಭಿಣಿಯಾಗಿರುವ ಸುದ್ದಿಯನ್ನು ರಾಜೀವ್ ಅವರಿಗೆ ತಿಳಿಸಿದರು. ಬಳಿಕ 1970ರ ಜೂನ್ 19ರಂದು ರಾಹುಲ್ ಗಾಂಧಿಗೆ ಜನ್ಮ ನೀಡಿದರು.




