Belgaum NewsCrimeKannada NewsKarnataka News

*ಬುದ್ಧಿವಾದ ಹೇಳಲು ಹೋದವನಿಗೇ ಚೂರಿ ಇರಿತ*: *ಬೆಳಗಾವಿಯಲ್ಲಿ ರಕ್ತಪಾತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಲೈದು ಜನರ ನಡುವಿನ ಜಗಳಕ್ಕೆ ಮಧ್ಯಪ್ರವೇಶಿಸಿ ಬುದ್ಧಿವಾದ ಹೇಳಲು ಹೋದ ವ್ಯಕ್ತಿಯೇ ಚೂರಿ ಇರಿತಕ್ಕೆ ಒಳಗಾದ ಆಘಾತಕಾರಿ ಘಟನೆ ಬೆಳಗಾವಿ ನಗರದ ಸದಾಶಿವ ನಗರದಲ್ಲಿ ನಡೆದಿದೆ.

ಸಲ್ಮಾನ್ ಬಾಗೇವಾಡಿ ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವ ನಗರದ ಕೆಫೆಯೊಂದರಲ್ಲಿ ಹಣಕಾಸಿನ ವಿಚಾರವಾಗಿ ನಾಲೈದು ಜನರ ನಡುವೆ ತಡರಾತ್ರಿ ಜೋರಾಗಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ಅಲ್ಲಿದ್ದ ಸಲ್ಮಾನ್, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಬೇಡಿ. ಹಣಕಾಸಿನ ಸಮಸ್ಯೆಯಿದ್ದರೆ ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ ಎಂದು ಬುದ್ಧಿವಾದ ಹೇಳಲು ಮುಂದಾಗಿದ್ದರು.

ಆದರೆ, ಸಲ್ಮಾನ್ ಅವರ ಮಾತಿನಿಂದ ಕೆರಳಿದ ಗುಂಪು ಅವರೊಂದಿಗೆ ವಾಗ್ವಾದಕ್ಕಿಳಿದಿದೆ. ಮಾತಿನ ಚಕಮಕಿ ತೀವ್ರಗೊಂಡ ಬೆನ್ನಲ್ಲೇ ಸಲ್ಮಾನ್ ಮೇಲೆ ಚೂರಿಯಿಂದ ಹಲ್ಲೆ ನಡೆಸಲಾಗಿದೆ . ಸಬೀಲ್ ಫಿರ್ಜಾದೆ ಎಂಬಾತನ ಗ್ಯಾಂಗ್ ತನ್ನ ಮೇಲೆ ದಾಳಿ ನಡೆಸಿದೆ ಎಂದು ಗಾಯಾಳು ಸಲ್ಮಾನ್ ಆರೋಪಿಸಿದ್ದಾರೆ.

ಘಟನೆಯಿಂದ ಸದಾಶಿವ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಚೂರಿ ಇರಿತ ಪ್ರಕರಣ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button