Kannada NewsKarnataka NewsLatestPolitics

*ವಾಕಿಂಗ್ ವೇಳೆ ಕುಸಿದು ಬಿದ್ದ ಮಾಜಿ ಉಪರಾಷ್ಟ್ರಪತಿ*: *ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಬೆಳಗಿನ ವಾಕಿಂಗ್ ವೇಳೆ ದಿಢೀರ್ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಇಂತಹ ಘಟನೆಗಳು ನಡೆದಿರುವುದು ಅಘಾತ ಮೂಡಿಸಿದೆ.

75 ವರ್ಷದ ಧನಕರ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಡಿಯೋ-ನ್ಯೂರೋ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೃದ್ರೋಗ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈವರೆಗೆ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಬುಧವಾರ ಬೆಳಗಿನ ವಾಕಿಂಗ್ ಸಂದರ್ಭದಲ್ಲಿ ಧನಕರ್ ಕೆಲವು ನಿಮಿಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಪಿಸಿಆರ್ ವಾಹನದಲ್ಲಿ ಅವರನ್ನು ಮನೆಗೆ ಕರೆದೊಯ್ದಿದ್ದರು. ಬಳಿಕ ಐಎಲ್‌ಬಿಎಸ್ ವೈದ್ಯಕೀಯ ತಂಡ ಹಾಗೂ ಏಮ್ಸ್ ವೈದ್ಯ ಡಾ. ಸಂದೀಪ್ ಸೇಠ್ ಚಿಕಿತ್ಸೆ ನೀಡಿದ್ದರು. ನಂತರ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂಬುಲೆನ್ಸ್ ಮೂಲಕ ಏಮ್ಸ್‌ಗೆ ದಾಖಲಿಸಲಾಯಿತು.

ಜಗದೀಪ್ ಧನಕರ್ ಅವರು ಆಗಸ್ಟ್ 2022ರಿಂದ ಜುಲೈ 21, 2025ರವರೆಗೆ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2025ರ ಜುಲೈ 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಳೆದ ಎರಡು ವರ್ಷಗಳಲ್ಲಿ ಧನಕರ್ ಹಲವು ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. 2025ರ ಮಾರ್ಚ್‌ನಲ್ಲಿ ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್‌ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು.

2025ರ ಜೂನ್‌ನಲ್ಲಿ ಅಧಿಕೃತ ಭೇಟಿಗಾಗಿ ನೈನಿತಾಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲೂ ಅವರು ಪ್ರಜ್ಞೆ ತಪ್ಪಿದ್ದರು. ತಮ್ಮ ಹಿಂದಿನ ಸಂಸದೀಯ ಸಹೋದ್ಯೋಗಿ ಮಹೇಂದ್ರ ಸಿಂಗ್ ಪಾಲ್ ಅವರನ್ನು ಆಲಿಂಗನ ಮಾಡುವ ವೇಳೆ ಕುಸಿದು ಬಿದ್ದಿದ್ದರು ಎಂದು ತಿಳಿದುಬಂದಿತ್ತು.

ಇನ್ನು ಜನವರಿಯಲ್ಲಿ ಮನೆಯಲ್ಲಿದ್ದಾಗ ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ಎರಡು ಬಾರಿ ಪ್ರಜ್ಞೆ ತಪ್ಪಿದ್ದರು. ಇದೀಗ ಮತ್ತೆ ವಾಕಿಂಗ್ ವೇಳೆ ಕುಸಿದು ಬಿದ್ದಿರುವುದರಿಂದ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ. ಏಮ್ಸ್ ಆಸ್ಪತ್ರೆಯ ಅಧಿಕೃತ ಮಾಹಿತಿ ಹೊರಬರಬೇಕಿದೆ.

Related Articles

Back to top button