Belagavi NewsBelgaum NewsBusinessKannada NewsKarnataka NewsLatest

*ಬೆಳಗಾವಿಯದ್ದು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ* *ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ವಿಫುಲ ಅವಕಾಶ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*

ಸ್ಥಳೀಯ ಉದ್ಯಮಿಗಳು ಅಂಚೆ ಇಲಾಖೆಯ ‘ಡಾಕ್ ಘರ್ ನಿರ್ಯತ್ ಕೇಂದ್ರ’ ಸದುಪಯೋಗಪಡಿಸಿಕೊಳ್ಳಲು ಸಲಹೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ, ಶ್ರೀಮಂತ ಉದ್ಯಮ ಪರಂಪರೆ ಹಾಗೂ ವೈವಿಧ್ಯಮಯ ಉತ್ಪನ್ನಗಳಿಗೆ ಹೆಸರಾದ ಬೆಳಗಾವಿ ಜಿಲ್ಲೆಗೆ ಜಾಗತಿಕ ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳಿವೆ. ಜಿಲ್ಲೆಯ ಉದ್ಯಮಿಗಳು, ಉತ್ಪಾದಕರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ಬೆಳಗಾವಿಯ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಬಹುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಬೆಳಗಾವಿ ಅಂಚೆ ವಿಭಾಗ ಹಾಗೂ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ (ಬಿಸಿಸಿಐ)ಯ ಸಂಯುಕ್ತಾಶ್ರಯದಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆಮದು ಮತ್ತು ರಫ್ತುದಾರರ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಹಾಗೂ ಉದ್ಯಮ ಇತಿಹಾಸ ಹೊಂದಿದೆ. ಜಿಲ್ಲೆಯ ಉತ್ಪನ್ನಗಳು ದೇಶದ ಗಡಿಗಳನ್ನು ದಾಟಿ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ. ಬೆಳಗಾವಿ ಮಾತ್ರವಲ್ಲದೆ ಚಿಕ್ಕೋಡಿಯ ಉತ್ಪನ್ನಗಳಿಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಜಿಲ್ಲೆಯ ಜನರು ವಿಶ್ವದ ಎಲ್ಲ ಭಾಗಗಳಲ್ಲಿಯೂ ನೆಲೆಸಿದ್ದು, ಈ ಜಾಗತಿಕ ಸಂಪರ್ಕವನ್ನು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಬೆಳಗಾವಿಯ ಬೆಳವಣಿಗೆಗೆ ಕೈಜೋಡಿಸೋಣ ಎಂದು ಕರೆ ನೀಡಿದರು.

ಜಿಲ್ಲೆಯ ಕರಕುಶಲ, ಕೈಗಾರಿಕಾ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಅಂಚೆ ಇಲಾಖೆಯ ‘ಡಾಕ್ ಘರ್ ನಿರ್ಯತ್ ಕೇಂದ್ರ’ ಮಹತ್ವದ ಮೈಲಿಗಲ್ಲಾಗಲಿದೆ. ಹಿಂದೆ ಪತ್ರಗಳ ರವಾನೆಗೆ ಸೀಮಿತವಾಗಿದ್ದ ಅಂಚೆ ಇಲಾಖೆ ಇಂದು ಸ್ಥಳೀಯ ಉತ್ಪಾದಕರನ್ನು ವಿಶ್ವದ ಮಾರುಕಟ್ಟೆಗೆ ಸಂಪರ್ಕಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಬೆಳಗಾವಿಯ ಫೌಂಡ್ರಿ ಉದ್ಯಮ, ಎಂಜಿನಿಯರಿಂಗ್ ಬಿಡಿಭಾಗಗಳು, ಶಹಾಪುರದ ಸೀರೆಗಳು ಹಾಗೂ ಕಬ್ಬು, ಬೆಲ್ಲ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳಿವೆ. ಚಿಕ್ಕೋಡಿಯ ಸಕ್ಕರೆ ಆಸ್ಟ್ರೇಲಿಯಾದವರೆಗೂ ತಲುಪಿರುವುದು ಜಿಲ್ಲೆಯ ಉತ್ಪನ್ನಗಳ ಗುಣಮಟ್ಟ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸ್ವಸಹಾಯ ಸಂಘಗಳು ತಯಾರಿಸುವ ಆಹಾರ ಉತ್ಪನ್ನಗಳು, ತಿನಿಸುಗಳು ಹಾಗೂ ಕರಕುಶಲ ವಸ್ತುಗಳನ್ನು ಬರ್ಲಿನ್, ಪ್ಯಾರಿಸ್ ಸೇರಿದಂತೆ ವಿಶ್ವದ ವಿವಿಧ ನಗರಗಳಲ್ಲಿರುವ ಗ್ರಾಹಕರಿಗೆ ಅಂಚೆ ಇಲಾಖೆಯ ಮೂಲಕ ನೇರವಾಗಿ ತಲುಪಿಸಬಹುದು. ವಿಶ್ವದ 200ಕ್ಕೂ ಅಧಿಕ ದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ರವಾನಿಸುವ ಸೌಲಭ್ಯವಿದ್ದು, ಸ್ಥಳೀಯ ಉದ್ಯಮಿಗಳು ಮತ್ತು ಉತ್ಪಾದಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಆರುಶಿ ಶರ್ಮಾ, ಪಿ.ಎಲ್. ಶ್ರೀದೇವಿ ಹಾಗೂ ಬಿಸಿಸಿಐ ಅಧ್ಯಕ್ಷ ಸ್ವಪ್ನಿಲ್ ಶಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಧಾರವಾಡ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಆರ್.ವೈ. ಮಧುಸಾಗರ್, ಬಿಸಿಸಿಐ ಪೋಸ್ಟಲ್ ಸಮಿತಿ ಅಧ್ಯಕ್ಷ ರೋಹಿತ್ ಕಪಾಡಿಯಾ, ರೂಪೇಶ್ ಕುಮಾರ್ ಕೆ.ಎನ್., ಕೆ.ಎಲ್. ರಮೇಶ್ ಹಾಗೂ ಕಿರಣ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button