Kannada NewsKarnataka NewsLatest

*ಇ-ಖಾತಾ ಅಕ್ರಮ ಹಗರಣ*: *ಸಹಾಯಕ ಆಯುಕ್ತ ಸೇರಿ 31 ಜನರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಇ-ಖಾತಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಸೇರಿ 31 ಜನರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ನಡೆದಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಇ-ಖಾತಾ ವಿತರಿಸಿದ ಆರೋಪದ ಮೇಲೆ ಸಹಾಯಕ ಆಯುಕ್ತ ಬಸವರಾಜ್ ಎನ್. ಮಾಘಿ ಸೇರಿದಂತೆ ಒಟ್ಟು 31 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ SARFAESI ಕಾಯ್ದೆಯಡಿ ಬ್ಯಾಂಕ್‌ಗಳು ಸಾಲ ಮರುಪಾವತಿಯಾಗದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ಇ-ಖಾತಾ ಪಡೆಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸೌಲಭ್ಯವನ್ನು ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣಕಾರರು ಮತ್ತು ಖಾಸಗಿ ಅರ್ಜಿದಾರರೊಂದಿಗೆ ಸೇರಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.

ನಿಯಮದ ಪ್ರಕಾರ ಸಲ್ಲಿಸಬೇಕಾದ SARFAESI ಆದೇಶ ಅಥವಾ ಮಾರಾಟ ಪ್ರಮಾಣಪತ್ರದ ಬದಲಿಗೆ ಸಾಮಾನ್ಯ ಮಾರಾಟ ಪತ್ರ, ಜಂಟಿ ಅಭಿವೃದ್ಧಿ ಒಪ್ಪಂದ ಸೇರಿದಂತೆ ಇತರೆ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳ ಆಧಾರದ ಮೇಲೆ ಅರ್ಹತೆ ಇಲ್ಲದ ನಿವೇಶನ ಹಾಗೂ ಕಟ್ಟಡಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆ.ಆರ್. ಪುರಂ ವಿಭಾಗದ ಸಹಾಯಕ ಆಯುಕ್ತ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಘಿ ವಿರುದ್ಧ ಗಂಭೀರ ಆರೋಪವಿದೆ. ಜನವರಿ 29ರಿಂದ ಜೂನ್ 19, 2026ರವರೆಗೆ ಅವರ ಲಾಗಿನ್ ಮೂಲಕ ಹೊರಮಾವು ಮತ್ತು ಕೆ.ಆರ್. ಪುರಂ ಪ್ರದೇಶಗಳಲ್ಲಿ 98 ಅನರ್ಹ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎನ್ನಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ 31 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಅವುಗಳನ್ನು ನೈಜ ದಾಖಲೆಗಳಂತೆ ಬಳಕೆ ಮಾಡಿದ ಆರೋಪಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button