CrimeKannada NewsKarnataka NewsLatest

*ಏಳು ಕೊಲೆಗಳ ಹಿಂದಿನ ಅಸಲಿ ಪ್ಲಾನ್‌ನಲ್ಲಿ ಮಗಳ ಪಾತ್ರ*: *ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು; ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ ಎಂದ ಪಾಪಿ*

ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆ ಮುಂದುವರಿದಂತೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಭೀಕರ ಕೃತ್ಯದ ಹಿಂದೆ ತಂದೆ ಮಾತ್ರವಲ್ಲ, ಮಗಳ ಪಾತ್ರವೂ ಇದೆಯೇ ಎಂಬ ಅನುಮಾನ ಮೂಡಿದೆ. ಹತ್ಯೆಗೂ ಮೊದಲೇ ತಂದೆ-ಮಗಳು ಸೇರಿ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಆರೋಪಿ ಇಂದುಶೇಖರ್ ಮನೆಯಲ್ಲಿ ಪೊಲೀಸರು ಸುದೀರ್ಘ ಮಹಜರು ನಡೆಸಿದ್ದಾರೆ. ಈ ವೇಳೆ ಆರೋಪಿಯನ್ನು ಸ್ಥಳದಲ್ಲೇ ನಿಲ್ಲಿಸಿ, ಪತ್ನಿ, ಅತ್ತೆ ಹಾಗೂ ಬಾಮೈದುನರ ಹತ್ಯೆ ಸೇರಿದಂತೆ ಏಳು ಕೊಲೆಗಳ ಘಟನೆಗಳನ್ನು ಮರುಸೃಷ್ಟಿ ಮಾಡಲಾಗಿದೆ.

ಪೊಲೀಸರ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಹತ್ಯೆಗೂ ಮುನ್ನ ಇಂದುಶೇಖರ್ ಮಗಳೊಂದಿಗೆ ಕುಳಿತು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ತಂದೆಗೆ ಮಗಳೇ ಕೆಲವು ಸಲಹೆಗಳನ್ನು ನೀಡಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ಇಬ್ಬರ ಯೋಜನೆಯಂತೆಯೇ ಏಳು ಮಂದಿಯ ಹತ್ಯೆ ನಡೆದಿದೆ ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡುತ್ತಿದ್ದ ಎನ್ನಲಾಗಿದ್ದು, ಮೃತದೇಹಗಳನ್ನು ಕಟ್ಟುವುದು ಮತ್ತು ಪ್ಯಾಕಿಂಗ್ ಮಾಡುವ ಕೆಲಸವನ್ನು ಮಗಳು ನಿರ್ವಹಿಸಿದ್ದಳು ಎನ್ನಲಾಗಿದೆ. ತಾಯಿಯ ಕುಟುಂಬವನ್ನೇ ಮುಗಿಸುವ ಸಂಚಿನಲ್ಲಿ ಮಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರಾಜಾಜಿನಗರದ ಮನೆಯಲ್ಲಿನ ಮಹಜರು ಬಳಿಕ ಪೊಲೀಸರು ನಗರದ ಇತರ ಸ್ಥಳಗಳಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಹಗ್ಗ, ಬೆಡ್‌ಶೀಟ್ ಹಾಗೂ ಕೆಮಿಕಲ್ ಖರೀದಿಸಿದ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಏಳು ಹತ್ಯೆಗಳಿಗೆ ಸಂಬಂಧಿಸಿದಂತೆ ಆರೋಪಿಯಿಂದ ಸಂಪೂರ್ಣ ವಿವರಣೆ ಪಡೆಯಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ಹಲವು ಮಾಹಿತಿಗಳನ್ನು ನೀಡಿದ್ದಾನೆ. ತನ್ನ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ನಂತರ ತಾನು ಈಗ ನೆಮ್ಮದಿಯಾಗಿದ್ದೇನೆ ಎಂದು ಆರೋಪಿ ಇಂದುಶೇಖರ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಪತ್ನಿ ನಿರಂತರವಾಗಿ ತನ್ನನ್ನು ಅವಮಾನಿಸುತ್ತಿದ್ದಳು ಮತ್ತು ತೀವ್ರ ಮುಜುಗರಕ್ಕೆ ಈಡುಮಾಡುತ್ತಿದ್ದಳು. ಪತ್ನಿಯ ಕುಟುಂಬದವರು ಯಾವಾಗಲೂ ಅವಳ ಪರವಾಗಿಯೇ ನಿಲ್ಲುತ್ತಿದ್ದರು ಮತ್ತು ತನ್ನನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಇಂದು ಶೇಖರ್‌ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ.

ಇಂದುಶೇಖರ್ ತನ್ನ ಅತ್ತೆಯ ಬಳಿ ಆಸ್ತಿಯಲ್ಲಿ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿದ್ದ. ಆದರೆ, ಆತನಿಗೆ ಸಿಗಬೇಕಾದ ನ್ಯಾಯಯುತ ಪಾಲು ಮಾತ್ರ ಸಿಗುತ್ತದೆ ಎಂದು ಅತ್ತೆ ಸ್ಪಷ್ಟಪಡಿಸಿದ್ದರು. ಇದರಿಂದ ಕೋಪಗೊಂಡಿದ್ದ ಇಂದುಶೇಖರ್‌ ಅತ್ತೆಯನ್ನು ಕೊಲೆ ಮಾಡಿದ ಬಳಿಕ ಆವರ ಹೆಬ್ಬೆರಳಿನ ಗುರುತ್ತನ್ನು  ಸ್ಟಾಂಪ್ ಪೇಪರ್‌ಗಳ ಮೇಲೆ ಪಡೆದುಕೊಂಡಿದ್ದ ಎನ್ನಲಾಗಿದೆ.

ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿರುವ ಪೊಲೀಸರು ಶೀಘ್ರದಲ್ಲೇ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆರೋಪಿ ನೀಡಿರುವ ಹೇಳಿಕೆಗಳ ಆಧಾರದ ಮೇಲೆ ಮಂಪರು ಪರೀಕ್ಷೆ ನಡೆಸಬೇಕೇ ಎಂಬ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ.

Related Articles

Back to top button