*ರೈಲ್ವೆ ಹಳಿ ಸ್ಫೋಟದ ಹಿಂದೆ ಪಾಕ್ ಹ್ಯಾಂಡ್ಲರ್ ಕೈವಾಡ?*: *ಪ್ರೀತಿ, ಹಣದ ಆಮಿಷಕ್ಕೆ ಬಿದ್ದ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಾಜಸ್ಥಾನದಲ್ಲಿ ರೈಲ್ವೆ ಹಳಿಯ ಮೇಲೆ ನಡೆದ ಐಇಡಿ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರೀತಿ, ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಜಾಲದ ನಂಟು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಸೂಚನೆಯಂತೆ ಇಬ್ಬರು ಕೆಲಸ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಪಂಜಾಬ್ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ನವೆಂಬರ್ 3ರಂದು ರಾಜಸ್ಥಾನದಲ್ಲಿ ರೈಲ್ವೆ ಹಳಿಯ ಮೇಲೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿತ್ತು. ಪಾಕಿಸ್ತಾನ ಮೂಲದ ‘ಶಾ’ ಎಂಬ ಹ್ಯಾಂಡ್ಲರ್ ಇದರ ಹಿಂದೆ ಇದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ಸೂಚನೆಯಂತೆ ಪಂಜಾಬ್ನ ಮಹಾಕ್ದೀಪ್ ಕೌರ್ ಮತ್ತು ದೇವಿಂದರ್ ಸಿಂಗ್ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೆಲಸಕ್ಕಾಗಿ ಇಬ್ಬರಿಗೆ ಒಟ್ಟು ಒಂದು ಲಕ್ಷ ರೂಪಾಯಿ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಪಾಕಿಸ್ತಾನಿ ಹ್ಯಾಂಡ್ಲರ್ ಸಂಪರ್ಕಕ್ಕೆ ಬಂದಿದ್ದು ಹೇಗೆ?
ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ದೋಸ್ತಪುರ ಗ್ರಾಮದ ಮಹಾಕ್ದೀಪ್ ಕೌರ್ ಕುಟುಂಬದ ಕೆಲವರು ಗಡಿಯಾಚೆಗಿನ ಕಳ್ಳಸಾಗಣೆ ಜಾಲದ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಆಕೆಯ ಮಾಜಿ ಪತಿ ಕರಣ್ದೀಪ್ ಸಿಂಗ್ ಮತ್ತು ಸೋದರಸಂಬಂಧಿಗೆ ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರ ಸಂಪರ್ಕವಿತ್ತು ಎಂಬ ಆರೋಪವಿದೆ.
ಗಡಿಯಾಚೆಯಿಂದ ಮಾದಕ ವಸ್ತುಗಳನ್ನು ತರಿಸುವ ಚಟುವಟಿಕೆಗಳ ಮೂಲಕವೇ ಮಹಾಕ್ದೀಪ್ಗೆ ‘ಶಾ’ ಎಂಬ ಹ್ಯಾಂಡ್ಲರ್ ಪರಿಚಯವಾಗಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕುಟುಂಬದ ಸಂಪರ್ಕದ ಮೂಲಕ ಆರಂಭವಾದ ಈ ನಂಟು ಬಳಿಕ ಆಕೆಯ ನೇರ ಸಂಪರ್ಕವಾಗಿ ಬೆಳೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಪ್ರೀತಿಯ ಬಲೆಗೆ ಬಿದ್ದ ಯುವಕ ಯಾರು?
ಈ ಪ್ರಕರಣದಲ್ಲಿ ಬಂಧಿತನಾಗಿರುವ ದೇವಿಂದರ್ ಸಿಂಗ್ ಪಾತ್ರವೂ ಪ್ರಮುಖವಾಗಿದೆ. ಬಂಧನಕ್ಕೂ ಸುಮಾರು ಮೂರು ತಿಂಗಳ ಮೊದಲು ಮಹಾಕ್ದೀಪ್ ಆತನಿಗೆ ಪರಿಚಯವಾಗಿದ್ದಳು. ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು ಎಂದು ದೇವಿಂದರ್ ಕುಟುಂಬದವರು ಹೇಳಿದ್ದಾರೆ.
ಮಹಾಕ್ದೀಪ್ ಮದುವೆಯಾಗುವುದಾಗಿ ಭರವಸೆ ನೀಡಿ ದೇವಿಂದರ್ನನ್ನು ತನ್ನ ಸಂಬಂಧಕ್ಕೆ ಸೆಳೆದು, ಬಳಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂಬುದು ಆತನ ತಾಯಿ ಬಲ್ಜಿತ್ ಕೌರ್ ಮತ್ತು ಚಿಕ್ಕಮ್ಮ ಸುಖ್ವಿಂದರ್ ಕೌರ್ ಆರೋಪಿಸಿದ್ದಾರೆ.
ಸ್ಫೋಟಕ್ಕೂ ಮುನ್ನ ಮೂರು ಬಾರಿ ರಾಜಸ್ಥಾನಕ್ಕೆ ಭೇಟಿ
ತನಿಖೆಯ ಪ್ರಕಾರ, ಮಹಾಕ್ದೀಪ್ ಮತ್ತು ದೇವಿಂದರ್ ಸಿಂಗ್ ಸ್ಫೋಟಕ್ಕೂ ಮುನ್ನ ಮೂರು ಬಾರಿ ರಾಜಸ್ಥಾನಕ್ಕೆ ತೆರಳಿದ್ದರು.
ಅಕ್ಟೋಬರ್ 3 ಮತ್ತು 4: ಮೊದಲ ಬಾರಿ ಶ್ರೀಗಂಗಾನಗರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹ್ಯಾಂಡ್ಲರ್ ಸ್ಫೋಟಕಗಳನ್ನು ನೀಡಿದ್ದಾನೆ. ಆದರೆ ರೈಲ್ವೆ ಹಳಿಯ ಬಳಿ ಇರಿಸಲಾಗಿದ್ದ ಸ್ಫೋಟಕ ಸಿಡಿಯದೆ ವಿಫಲವಾಗಿತ್ತು ಎನ್ನಲಾಗಿದೆ.
ಅಕ್ಟೋಬರ್ 12: ಎರಡನೇ ಬಾರಿ ರಾಜಸ್ಥಾನಕ್ಕೆ ತೆರಳಿದ್ದರು. ಈ ಭೇಟಿಯ ಉದ್ದೇಶ ಮತ್ತು ಹ್ಯಾಂಡ್ಲರ್ನೊಂದಿಗಿನ ಸಂಪರ್ಕದ ಬಗ್ಗೆ ತನಿಖೆ ನಡೆಯುತ್ತಿದೆ.
ಅಕ್ಟೋಬರ್ 30ರ ನಂತರ: ಮೂರನೇ ಬಾರಿ ರಾಜಸ್ಥಾನಕ್ಕೆ ತೆರಳಿ ಅದೇ ಹೋಟೆಲ್ನಲ್ಲಿ ತಂಗಿದ್ದರು. ಹೋಟೆಲ್ ಮಾಲೀಕರಿಂದ ಮೋಟಾರ್ ಸೈಕಲ್ ಪಡೆದು ರೈಲ್ವೆ ಹಳಿಯ ಬಳಿ ಐಇಡಿ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ‘ಶಾ’ ಇಬ್ಬರಿಗೂ ಹಣದ ಆಮಿಷವೊಡ್ಡಿದ್ದ ಎನ್ನಲಾಗಿದೆ. ರಾಜಸ್ಥಾನಕ್ಕೆ ತೆರಳುವುದು, ಸ್ಥಳೀಯ ವ್ಯವಸ್ಥೆ ಮಾಡಿಕೊಳ್ಳುವುದು, ಹ್ಯಾಂಡ್ಲರ್ ಸೂಚನೆ ಪಾಲಿಸುವುದು ಹಾಗೂ ರೈಲ್ವೆ ಹಳಿಯಲ್ಲಿ ಸ್ಫೋಟಕ ಸಾಧನ ಇರಿಸುವುದು ಇವರಿಗೆ ವಹಿಸಲಾಗಿದ್ದ ಕೆಲಸ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಹಣವನ್ನು ಹೇಗೆ ಹಂಚಲಾಗಿತ್ತು ಮತ್ತು ಪಾವತಿಯಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಹಾಕ್ದೀಪ್ ಕುಟುಂಬದ ಕೆಲವು ಸದಸ್ಯರ ವಿರುದ್ಧ ಮಾದಕ ವಸ್ತು ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಪ್ರಕರಣಗಳಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕೆಯ ಮಾಜಿ ಪತಿ ಕರಣ್ದೀಪ್ ಸಿಂಗ್ ಸುಮಾರು ಒಂದು ವರ್ಷದ ಹಿಂದೆ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎನ್ನಲಾಗಿದೆ. ಆಕೆಯ ಸಹೋದರ ಕೂಡ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ.
ಈ ಹಿನ್ನೆಲೆ ಪಾಕಿಸ್ತಾನದಿಂದ ಮಾದಕ ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದ ಮಾರ್ಗಗಳನ್ನೇ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಾಗಣೆಗೆ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣದ ಆಮಿಷವೊಡ್ಡಿ ಸ್ಥಳೀಯ ಯುವಕರನ್ನು ಇಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಆಯಾಮವನ್ನೂ ಪರಿಶೀಲಿಸುತ್ತಿದ್ದಾರೆ.
ಮಹಾಕ್ದೀಪ್ ತಾಯಿ ಸರಬ್ಜಿತ್ ಕೌರ್ ಹೇಳಿಕೆಯ ಪ್ರಕಾರ, ಸ್ಫೋಟಕ್ಕೂ ಎರಡು ದಿನಗಳ ಮೊದಲು ಮಗಳು ಸ್ನೇಹಿತರನ್ನು ಭೇಟಿಯಾಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಸ್ಫೋಟದ ನಾಲ್ಕೈದು ದಿನಗಳ ಬಳಿಕ ಮನೆಗೆ ಮರಳಿದ್ದಳು. ಬಳಿಕ ಹೆಚ್ಚಾಗಿ ಕೋಣೆಯಲ್ಲೇ ಇರುತ್ತಿದ್ದಳು ಮತ್ತು ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂದು ತಾಯಿ ತಿಳಿಸಿದ್ದಾರೆ.
ಇನ್ನೊಂದೆಡೆ, ದೇವಿಂದರ್ ಸಿಂಗ್ ಕೂಡ ಸ್ಫೋಟಕ್ಕೂ ಎರಡು ದಿನಗಳ ಮೊದಲು ದೆಹಲಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಸ್ಫೋಟದ ಮೂರು ದಿನಗಳ ಬಳಿಕ ಮನೆಗೆ ಮರಳಿದ್ದ ಎಂದು ಕುಟುಂಬದವರು ಹೇಳಿದ್ದಾರೆ. ಮಹಾಕ್ದೀಪ್ ಬಂಧನದ ನಂತರ ದೇವಿಂದರ್ಗೆ ಕರೆ ಮಾಡಿ ಹೊರಗೆ ಬರುವಂತೆ ಹೇಳಿ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (ATS) ಶಂಕಿತರ ಬಗ್ಗೆ ಮಾಹಿತಿ ಪಡೆದ ಬಳಿಕ ಪಂಜಾಬ್ ಪೊಲೀಸರನ್ನು ಸಂಪರ್ಕಿಸಿತ್ತು. ಗುರುದಾಸ್ಪುರ ಜಿಲ್ಲೆಯ ಕಲಾನೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಬಳಿಕ ಪಂಜಾಬ್ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಮತ್ತು ರಾಜಸ್ಥಾನ ATS ಜಂಟಿ ಕಾರ್ಯಾಚರಣೆ ನಡೆಸಿ ಮಹಾಕ್ದೀಪ್ ಕೌರ್ ಹಾಗೂ ದೇವಿಂದರ್ ಸಿಂಗ್ ಅವರನ್ನು ಬಂಧಿಸಿವೆ. ರೈಲ್ವೆ ಸ್ಫೋಟದ ಹಿಂದಿರುವ ಸಂಪೂರ್ಣ ಜಾಲ, ಹ್ಯಾಂಡ್ಲರ್ನ ಪಾತ್ರ ಮತ್ತು ಸ್ಫೋಟಕಗಳ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ.


