*ಬಿಲ್ಕಿಸ್ ಬಾನೋ ಕೇಸ್*: *ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳ ಶಿಕ್ಷೆ ಅಮಾನತು*

ಪ್ರಗತಿವಾಹಿನಿ ಸುದ್ದಿ: ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಹಾಗೂ ಕುಟುಂಬದವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ.
ಇಬ್ಬರೂ ಅಪರಾಧಿಗಳು ಈಗಾಗಲೇ 17 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ ಮತ್ತು ಅವರ ಮೇಲ್ಮನವಿಯಲ್ಲಿ ಕಾನೂನು ಹಾಗೂ ವಾಸ್ತವಾಂಶಗಳ ಕುರಿತು ಪರಿಶೀಲಿಸಬೇಕಾದ ಅಂಶಗಳಿವೆ ಎಂದು ಅಭಿಪ್ರಾಅಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಬ್ಬರು ಅಪರಾಧಿಗಳ ಜೈವಾವಧಿ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಮಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ (Bombay High Court) ತೀರ್ಪನ್ನು ಬಿಪಿನ್ಚಂದ್ ಜೋಶಿ ಮತ್ತು ಪ್ರದೀಪ್ ಮೊಧಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಜಾಮೀನು ನೀಡುವ ವೇಳೆ, ಅರ್ಜಿದಾರರಲ್ಲಿ ಒಬ್ಬರಾದ ಜೋಶಿ ಅವರು ತೀವ್ರ ಅಂಗವೈಕಲ್ಯ ಹೊಂದಿರುವುದನ್ನೂ ನ್ಯಾಯಪೀಠ ಪರಿಗಣನೆಗೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಪರಾಧದ ಗಂಭೀರತೆ ಹಾಗೂ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಅಪರಾಧಿಗಳ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರಲ್ಲಿ ಒಬ್ಬರ ಹೆಸರು ಆರಂಭಿಕ ಎಫ್ಐಆರ್ನಲ್ಲಿ (FIR) ಇರಲಿಲ್ಲ. ಘಟನೆ ನಡೆದ ಸುಮಾರು ಮೂರು ವರ್ಷಗಳ ನಂತರ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಂತ್ರಸ್ತೆಯು ಅತ್ಯಾಚಾರ ಆರೋಪದ ಕುರಿತು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯ ವೇಳೆ ವೈದ್ಯರ ಮುಂದೆ ನೀಡಿದ ಹೇಳಿಕೆಯಲ್ಲೂ ಈ ಇಬ್ಬರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ ಘಟನೆಯ ಸಮಯದಲ್ಲಿ ಅವರು ಗುಂಪಿನಲ್ಲಿ ಇದ್ದಿರಬಹುದು ಎಂಬುದನ್ನು ಬಿಟ್ಟರೆ, ಅವರ ವಿರುದ್ಧ ಯಾವುದೇ ನೇರ ಕೃತ್ಯದ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು. ಈ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ವರ್ಷದ ಮಾರ್ಚ್ನಲ್ಲಿ ನೋಟಿಸ್ ಜಾರಿ ಮಾಡಿತ್ತು.
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ 21 ವರ್ಷದವರಾಗಿದ್ದ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೆ, ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಸನ್ನಡತೆ ಆಧಾರಿತ ಅವಧಿಪೂರ್ವ ಬಿಡುಗಡೆಯನ್ನು ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. 2024ರ ಜನವರಿಯಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಶಿಕ್ಷೆ ಕಡಿತಗೊಳಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ ಎಂದು ಹೇಳಿ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು ಮತ್ತು ಎರಡು ವಾರಗಳಲ್ಲಿ ಶರಣಾಗುವಂತೆ ಎಲ್ಲಾ 11 ಅಪರಾಧಿಗಳಿಗೆ ಸೂಚಿಸಿತ್ತು.


