Kannada NewsKarnataka NewsLatestPolitics

*ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ*: *ಕೇಂದ್ರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ E20 ಪೆಟ್ರೋಲ್ ಗುಣಮಟ್ಟ ಮತ್ತು ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಹೊಸ ವಿವಾದ ಶುರುವಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಪೆಟ್ರೋಲ್‌ನಲ್ಲಿ ಮಿಶ್ರಣವಾಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಲ್ಯಾಬ್ ವರದಿಗಳ ಸಹಿತ ಪತ್ರ ಬರೆದಿದ್ದಾರೆ. ಪರೀಕ್ಷಿಸಿದ ಮಾದರಿಗಳಲ್ಲಿ ಶೇಕಡಾ 31.2ರಷ್ಟು ಎಥೆನಾಲ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ 63 ಪೆಟ್ರೋಲ್ ಬಂಕ್‌ಗಳನ್ನು ಪರಿಶೀಲಿಸಲಾಗಿದ್ದು, ತೈಲ ಕಂಪನಿಗಳ 42 ವರದಿಗಳಲ್ಲಿ ಎಥೆನಾಲ್ ಪ್ರಮಾಣದ ಶೇಕಡಾವಾರು ವಿವರವೇ ನಮೂದಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಸ್ವತಂತ್ರ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ 14 ಮಾದರಿಗಳ ಪೈಕಿ 11ರಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ. ಗರಿಷ್ಠ ಪ್ರಮಾಣ ಶೇಕಡಾ 31.2ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ಪ್ರೀಮಿಯಂ ಗುಣಮಟ್ಟದ ಪೆಟ್ರೋಲ್‌ನಲ್ಲಿಯೂ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವಾಗುತ್ತಿದೆ ಎಂಬ ವಿಚಾರವನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಲೀಟರ್‌ಗೆ 120ರಿಂದ 140 ರೂಪಾಯಿ ಬೆಲೆ ಇರುವ ಪ್ರೀಮಿಯಂ ಪೆಟ್ರೋಲ್‌ನಲ್ಲಿಯೂ ಎಥೆನಾಲ್ ಮಿಶ್ರಣವಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೆಟ್ರೋಲ್ ಲಭ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಕೇಂದ್ರಕ್ಕೆ ಐದು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವ ಫಲಕ ಅಳವಡಿಸಬೇಕು. ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿಯೂ ಎಥೆನಾಲ್ ಪ್ರಮಾಣವನ್ನು ನಮೂದಿಸಬೇಕು. E10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ಪೆಟ್ರೋಲ್ ಗುಣಮಟ್ಟವನ್ನು ಸ್ವತಂತ್ರ ಪ್ರಯೋಗಾಲಯಗಳಿಂದ ಪರೀಕ್ಷಿಸಬೇಕು. ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಲು E20 ನಿಧಿ ಸ್ಥಾಪಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಇನ್ನು, ಪೆಟ್ರೋಲ್ ಬಂಕ್‌ಗಳಲ್ಲಿನ ಅಳತೆ ಮತ್ತು ವಿತರಣಾ ವ್ಯವಸ್ಥೆಯಲ್ಲಿಯೂ ದೋಷಗಳು ಕಂಡುಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 805 ಬಂಕ್‌ಗಳಲ್ಲಿ ಪರಿಶೀಲನೆ ನಡೆಸಿದಾಗ 768 ಬಂಕ್‌ಗಳಿಗೆ ಮರು ಮಾಪನಾಂಕ ನಿರ್ಣಯದ ಅಗತ್ಯ ಕಂಡುಬಂದಿದೆ. 3,071 ಪೆಟ್ರೋಲ್ ನಳಿಕೆಗಳನ್ನು ಪರೀಕ್ಷಿಸಿದಾಗ 2,618ರಲ್ಲಿ ವ್ಯತ್ಯಾಸ ಪತ್ತೆಯಾಗಿದೆ. ನಿಯಮ ಉಲ್ಲಂಘಿಸಿದ 101 ಬಂಕ್‌ಗಳಿಗೆ ಒಟ್ಟು 6.66 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಎಥೆನಾಲ್ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ರಿಜ್ವಾನ್ ಅರ್ಷದ್ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಜನರು ಕಷ್ಟಪಟ್ಟು ದುಡಿದು ವಾಹನ ಖರೀದಿಸುತ್ತಾರೆ. ಇಂಧನದ ಗುಣಮಟ್ಟದಿಂದ ವಾಹನಗಳಿಗೆ ಹಾನಿಯಾದರೆ ಅದಕ್ಕೆ ಪರಿಹಾರ ಸಿಗುವ ವ್ಯವಸ್ಥೆ ಇರಬೇಕು. ಹೀಗಾಗಿ E20 ನೀತಿಯಲ್ಲಿ ತುರ್ತು ತಿದ್ದುಪಡಿ ತರಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Related Articles

Back to top button