Belagavi NewsBelgaum NewsKannada NewsKarnataka NewsPolitics

*ಅಧಿವೇಶನದ ಬೆನ್ನಲ್ಲೇ ಅಥಣಿ ಜಿಲ್ಲೆ ರಚನೆಗೆ ಸವದಿ ಒಲವು*: *ಇನ್ನೆರಡು ತಾಲೂಕು ಸೇರ್ಪಡೆಗೆ ಪ್ರಸ್ತಾಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆ ಹಾಗೂ ನೂತನ ಅಥಣಿ ಜಿಲ್ಲೆ ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸೋಣ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದು, ಜಿಲ್ಲಾ ವಿಭಜನೆ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಅಥಣಿ, ಕಾಗವಾಡ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರಗಳ ಜನರು ಒಂದಾಗಿದ್ದೇವೆ. ಇನ್ನೆರಡು ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ನೂತನ ಜಿಲ್ಲೆ ರಚನೆ ಮಾಡೋಣ ಎಂದು ಪ್ರಸ್ತಾಪಿಸಿದ್ದಾರೆ.

ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲ ಭಾಗದ ಜನರು ಕೂಡ ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿವೇಶನದ ಬಳಿಕ ಮುಂದಿನ ಹೆಜ್ಜೆ ಇಡೋಣ. ಈಗಾಗಲೇ ಅಥಣಿಗೆ ಕೆಲವು ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಉಳಿದ ಕಚೇರಿಗಳನ್ನು ಕೂಡ ಹಂತ ಹಂತವಾಗಿ ತರಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾ ವಿಭಜನೆಗೆ ಆಡಳಿತಾತ್ಮಕ ಕಾರಣ

ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ದೂರದ ತಾಲೂಕುಗಳ ಜನರು ಸರ್ಕಾರಿ ಕೆಲಸಗಳಿಗಾಗಿ 80ರಿಂದ 120 ಕಿ.ಮೀ.ವರೆಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆಡಳಿತದ ಅನುಕೂಲಕ್ಕಾಗಿ ಜಿಲ್ಲೆ ವಿಭಜಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ನೂತನ ಜಿಲ್ಲೆ ರಚನೆಯಾದರೆ ಸರ್ಕಾರಿ ಕಚೇರಿಗಳು ಜನರಿಗೆ ಹತ್ತಿರವಾಗಲಿದ್ದು, ಆಡಳಿತಾತ್ಮಕ ಕೆಲಸಗಳು ಸುಲಭವಾಗಲಿವೆ. ಕೃಷಿ, ಸಕ್ಕರೆ ಉದ್ಯಮ ಹಾಗೂ ಸ್ಥಳೀಯ ಕೈಗಾರಿಕೆಗಳ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ. ರಸ್ತೆ, ಮಾರುಕಟ್ಟೆ ಸೇರಿದಂತೆ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉದ್ಯೋಗಾವಕಾಶಗಳ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಿದೆ.

ಬೆಳಗಾವಿ ಜಿಲ್ಲೆಯ ವ್ಯಾಪ್ತಿ ಎಷ್ಟು ದೊಡ್ಡದು?

ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳು, 3 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. 15 ತಾಲೂಕುಗಳು, 6 ಆರ್‌ಟಿಒ ಕಚೇರಿಗಳು ಹಾಗೂ 506 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಇಷ್ಟೊಂದು ವಿಶಾಲ ಆಡಳಿತಾತ್ಮಕ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ರಚಿಸಬೇಕೆಂಬ ಕೂಗು ಆಗಾಗ್ಗೆ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಅಥಣಿ ಜಿಲ್ಲೆ ರಚನೆ ಕುರಿತು ಲಕ್ಷ್ಮಣ ಸವದಿ ನೀಡಿರುವ ಹೇಳಿಕೆ ಜಿಲ್ಲಾ ವಿಭಜನೆಯ ಚರ್ಚೆಗೆ ಮತ್ತೆ ಕಿಚ್ಚು ಹಚ್ಚಿದೆ. ಆದರೆ ಯಾವ ಯಾವ ತಾಲೂಕುಗಳನ್ನು ಸೇರಿಸಿ ಜಿಲ್ಲೆ ರಚಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Related Articles

Back to top button