*ಬೆಳಗಾವಿ ಪಾಲಿಕೆಯಿಂದ ತೆರಿಗೆದಾರರಿಗೆ ಗುಡ್‌ನ್ಯೂಸ್*: *3 ಜನ ಸ್ನೇಹಿ ಸೇವೆಗಳು ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿ, ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ಮಹಾನಗರ ಪಾಲಿಕೆ ಮೂರು ಜನಸ್ನೇಹಿ ಸೇವೆಗಳನ್ನು ಆರಂಭಿಸಿದೆ.
ಇನ್ನು ಮುಂದೆ ಪಾಲಿಕೆ ಕಚೇರಿಗಳಿಗೆ ಅಲೆದಾಡದೆ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದು ಎಂದು ಕಂದಾಯ ಶಾಖೆಯ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ತಿಳಿಸಿದರು.
ಪಾಲಿಕೆಯಲ್ಲಿ ನಡೆದ ಕಂದಾಯ ಶಾಖೆಯ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ತೆರಿಗೆ ಪಾವತಿಗಾಗಿ ವಿಶೇಷ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಬಲ್ಕ್ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಚಾಟ್‌ಬಾಟ್ ಹಾಗೂ ಬಿಬಿಪಿಎಸ್ ಮೂಲಕ ತೆರಿಗೆ ಪಾವತಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮೂರು ಸೇವೆಗಳು ಯಾವುವು?
ತೆರಿಗೆದಾರರಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ, ಬಾಕಿ ತೆರಿಗೆಯ ಮಾಹಿತಿ ನೀಡಲಾಗುತ್ತದೆ. ಇದರಿಂದ ಬಾಕಿ ಮೊತ್ತ ತಿಳಿದು ಪಾವತಿಸಬಹುದು.
7090022888 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ, ಈಗಾಗಲೇ ಪಾವತಿಸಿರುವ ತೆರಿಗೆ, ಬಾಕಿ ಮೊತ್ತ ಹಾಗೂ ಪ್ರಸ್ತುತ ಪಾವತಿಸಬೇಕಾದ ತೆರಿಗೆಯ ವಿವರ ಪಡೆಯಬಹುದು. ಬಾಕಿ ತೆರಿಗೆ ಪಾವತಿಸಿದ ಬಳಿಕ ಪ್ರಸಕ್ತ ಸಾಲಿನ ತೆರಿಗೆ ಪಾವತಿಗೆ ಅವಕಾಶ ದೊರೆಯಲಿದೆ.
ಪೇಟಿಎಂ, ಗೂಗಲ್ ಪೇ ಹಾಗೂ ಫೋನ್‌ಪೇ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದು.
80 ಸಾವಿರ ಆಸ್ತಿಗಳ ತೆರಿಗೆ ಬಾಕಿ
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.71 ಲಕ್ಷ ಆಸ್ತಿಗಳಿದ್ದು, ಈ ಪೈಕಿ 90 ಸಾವಿರ ಆಸ್ತಿಗಳ ತೆರಿಗೆ ಪಾವತಿಯಾಗಿದೆ. ಇನ್ನೂ ಸುಮಾರು 80 ಸಾವಿರ ಆಸ್ತಿಗಳ ತೆರಿಗೆ ವಸೂಲಿ ಬಾಕಿ ಇದೆ ಎಂದು ತಿಳಿಸಿದರು.
ಈ ಹೊಸ ವ್ಯವಸ್ಥೆಯಿಂದ ಉತ್ತರ, ದಕ್ಷಿಣ, ಮಧ್ಯ ಹಾಗೂ ಬೆಳಗಾವಿ-1 ವಲಯ ಕಚೇರಿಗಳು ಅಥವಾ ಕಂಪ್ಯೂಟರ್ ಕೇಂದ್ರಗಳಿಗೆ ತೆರಳುವ ಅಗತ್ಯವಿಲ್ಲ. ಮನೆ, ವಾಣಿಜ್ಯ ಹಾಗೂ ಕೈಗಾರಿಕಾ ಆಸ್ತಿಗಳ ತೆರಿಗೆಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಪಾವತಿಸಬಹುದು. ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಬಹುದು.
ನಾಗರಿಕರ ಸಮಯ ಉಳಿತಾಯದ ಜೊತೆಗೆ ಸಕಾಲದಲ್ಲಿ ತೆರಿಗೆ ಪಾವತಿಗೂ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಆದ್ದರಿಂದ ಸಾರ್ವಜನಿಕರು ಮೂರು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಸಿದ್ದು ಹುಲ್ಲೋಳಿ ಮನವಿ ಮಾಡಿದರು.
ಸಭೆಯಲ್ಲಿ ಪಾಲಿಕೆಯ ವಿವಿಧ ವಲಯ ಆಯುಕ್ತರು, ಕಂದಾಯ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.




