Kannada NewsKarnataka NewsLatest

*ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೈಕೋರ್ಟ್‌ನಲ್ಲಿ ಮಹತ್ವದ ತಿರುವು*: *ಗಿರೀಶ್ ಮಟ್ಟಣ್ಣನವರ್‌ಗೆ ಹಿನ್ನಡೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆಯನ್ನೇ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ವಿಶೇಷ ತನಿಖಾ ತಂಡದ (SIT) ತನಿಖೆ ಮುಂದುವರಿಯಲು ಅವಕಾಶ ಸಿಕ್ಕಂತಾಗಿದೆ.

ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪದೊಂದಿಗೆ ಮುಸುಕುಧಾರಿ ವ್ಯಕ್ತಿಯೊಬ್ಬ ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ತನಿಖೆ ಕೈಗೆತ್ತಿಕೊಂಡ SIT ಅಧಿಕಾರಿಗಳು ಮುಸುಕುಧಾರಿ ವ್ಯಕ್ತಿಯ ಹೇಳಿಕೆಗಳು, ಪತ್ತೆಯಾದ ತಲೆಬುರುಡೆ ಹಾಗೂ ಇತರ ಸಾಕ್ಷ್ಯಗಳ ಮೂಲವನ್ನು ಪರಿಶೀಲಿಸಿದ್ದರು. ಈ ವೇಳೆ ಮೂಲ ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿದ್ದವು. ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ ಎಂದು SIT ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

ಈ ಸಂಬಂಧ ಚಿನ್ನಯ್ಯ ಅಲಿಯಾಸ್ ಚಿನ್ನ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣ, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಆರು ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ, ನಕಲಿ ದಾಖಲೆ ತಯಾರಿಕೆ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದ ಗಂಭೀರ ಆರೋಪಗಳನ್ನು SIT ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ನು ತನಿಖೆ ತಮ್ಮ ವಿರುದ್ಧ ತಿರುಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ 2025ರ ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗ ಪ್ರಕರಣ ರದ್ದುಪಡಿಸಲು ನಿರಾಕರಿಸಿದ್ದ ನ್ಯಾಯಾಲಯ, ತನಿಖೆಯ ವೇಳೆ ಅರ್ಜಿದಾರರಿಗೆ ಕಿರುಕುಳ ನೀಡದಂತೆ SITಗೆ ಸೂಚಿಸಿತ್ತು. ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನೂ ತೆರವುಗೊಳಿಸಿತ್ತು.

ಇದೀಗ ಪ್ರಕರಣ ರದ್ದುಪಡಿಸುವಂತೆ ಕೋರಿ ಮತ್ತೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ. ಹೀಗಾಗಿ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮುಂದುವರಿಯಲು ಕಾನೂನಾತ್ಮಕ ಹಾದಿ ಸುಗಮವಾದಂತಾಗಿದೆ. ಮುಂದಿನ ದಿನಗಳಲ್ಲಿ SIT ತನಿಖೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Related Articles

Back to top button