ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ಲಿಂಗನಮಠದ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಪುರ ಗ್ರಾಮದ ನಾಗರಿಕರು ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ತಮ್ಮ ಗ್ರಾಮಕ್ಕೆ ಆಗಮಿಸಿರುವ ಸಂಗತಿ ತಿಳಿಯುತ್ತಿದ್ದಂತೆ ಒಂದೆಡೆ ಸೇರಿ ಸಮಸ್ಯೆಗಳ ಸುರಿಮಳೆಗೈದರು.
ನಿಯಮಿತವಾಗಿ ಶುದ್ಧ ಕುಡಿವ ನೀರು ಸರಬರಾಜು ಇಲ್ಲದೆ ವಾರಕ್ಕೊಮ್ಮೆಯಂತೆ ಬಿಡುವ ನೀರು ಸಾಕಾಗದೆ ಪರದಾಡುವ ಪರಿಸ್ಥಿತಿಯನ್ನು ಗ್ರಾಮದ ಮಹಿಳೆಯರು ಎಳೆಎಳೆಯಾಗಿ ಬಿಚ್ಚಿಟ್ಟರು. ಅದೂ ಕಲುಷಿತ ನೀರು ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಸಮಸ್ಯೆ ಕಾಡುತ್ತಿರುವುದನ್ನು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಗ್ರಾ.ಪಂ. ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ಪರಿಶೀಲಿಸಿ ಅದಕ್ಕೆ ಪರಿಹಾರ ಒದಗಿಸಿ ಕ್ರಮಕೈಕೊಂಡ ವರದಿಯನ್ನು ಎರಡು ದಿನಗಳಲ್ಲಿ ತಮಗೆ ಒಪ್ಪಿಸಲು ಖಡಕ್ಕಾಗಿ ಸೂಚಿಸಿದರು.
ಗ್ರಾಮದ ಜನರಿಗೆ ನೀಡುವ ಪಡಿತರ ಸಾಮಗ್ರಿಗಳನ್ನು ದೂರದ ಗೋದಗೇರಿ ಗ್ರಾಮಕ್ಕೆ ಹೋಗಿ ತರುವುದು ಹಲವು ಅನಾನುಕೂಲತೆ ಆಗುತ್ತಿದ್ದು, ವಾರಕ್ಕೊಮ್ಮೆ ಪುರ ಗ್ರಾಮಕ್ಕೆ ಬಂದು ಇರುವ ೧೦೦-೧೫೦ ಜನ ಪಡಿತರ ಪಡೆಯುವ ಕುಟುಂಬಗಳಿಗೆ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಮಹಿಳೆಯರು ಪಟ್ಟು ಹಿಡಿದಾಗ ಶಾಸಕರು ಖಾಸಗಿ ವಿತರಕರು ಪಡಿತರ ಹಂಚುವವರಾಗಿದ್ದರೆ ಈ ರೀತಿ ವ್ಯವಸ್ಥೆ ಮಾಡಬಹುದು, ಸಹಕಾರ ಸಂಘದಿಂದ ವಿತರಣೆ ಆಗುತ್ತಿದ್ದರೆ ಬದಲಿಸಲಾಗದು ಎಂದರು.
ಮೃತರ ಅಂತ್ಯಕ್ರಿಯೆಯನ್ನು ಸ್ವಂತ ಸ್ಥಳಗಳಲ್ಲಿ ಮಾಡುವ ಪ್ರಸಂಗ ಇರುವುದರಿಂದ ಗ್ರಾಮಕ್ಕೆ ಅನುಕೂಲವಾಗುವ ಸ್ಮಶಾನ ಸ್ಥಳ ಅವಶ್ಯ ಇದೆ ಎಂಬ ಬೇಡಿಕೆ ಇಟ್ಟರು. ಅದರಂತೆ ವಿದ್ಯುತ್ ಕಣ್ಣಾಮುಚ್ಚಾಲೆ ಸರಿಪಡಿಸಲು ಕೂಡ ವಿನಂತಿಸಿಕೊಂಡರು.
ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ. ಅಳ್ನಾವರಕ್ಕೆ ತಲುಪುವ ಸಂಪರ್ಕರಸ್ತೆ ಹದಗೆಟ್ಟಿದ್ದು, ತಗ್ಗು-ದಿಣ್ಣೆ ಹಾಗೂ ಧೂಳು ಮಯವಾಗಿದೆ. ಸಂಚರಿಸಲು ಪರದಾಡುವ ಪರಿಸ್ಥಿತಿ ಇರುವುದನ್ನು ಗಮನಿಸಿದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳಿಗೆ ತಕ್ಷಣ ಫೋನ್ ಮೂಲಕ ಸಂಪರ್ಕಿಸಿ, ವಿವರ ಪಡೆದು ೫-೬ ದಶಕಗಳ ಹಿಂದಿನ ಶಿಥಿಲಾವಸ್ಥೆಯ ಹಳ್ಳದ ಸೇತುವೆ ಮರುನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಬಸ್ ಪ್ರಾರಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕರು ಭರವಸೆ ನೀಡಿದರು. ಇದರಿಂದ ನಿರಾಳರಾದ ನಾಗರಿಕರು ಹಳಿದಾಟಲು ಪಡುವ ಪಡಿಪಾಟಲು ಹಾಗೂ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ನಿಟ್ಟುಸಿರು ಬಿಟ್ಟರು. ಕೊನೆಗೆ ಮಹಿಳೆಯರು ಮತ್ತು ಮುಖಂಡರು ಶಾಸಕರಿಗೆ ಧನ್ಯವಾದ ಸಲ್ಲಿಸಿ ಬೀಳ್ಕೊಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ