*ನೂಡಲ್ಸ್ ತಿಂದು ನಿದ್ರೆಗೆ ಜಾರಿದ ಸಹೋದರಿಯರು*: *ಬೆಳಗಾಗುವಷ್ಟರಲ್ಲಿ ಕಿರಿಯ ಮಗಳು ಸಾವು, ಅಕ್ಕ ಪ್ರಾಣಾಪಾಯದಿಂದ ಪಾರು*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ತಯಾರಿಸಿದ ನೂಡಲ್ಸ್ ಸೇವಿಸಿದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಕ್ಕ ಅಸ್ವಸ್ಥಗೊಂಡಿರುವ ದುರಂತ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನವೆಂಬರ್ 19ರಂದು ಪಿಹು ಕುಮಾವತ್ ಮತ್ತು ಆಕೆಯ ಅಕ್ಕ ದಿವ್ಯಾಂಶಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾವೇ ನೂಡಲ್ಸ್ ತಯಾರಿಸಿಕೊಂಡು ಸೇವಿಸಿದ್ದರು. ಬಳಿಕ ಇಬ್ಬರೂ ನಿದ್ರೆಗೆ ಜಾರಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ತಾಯಿ ಮನೆಗೆ ಮರಳಿದಾಗ ದಿವ್ಯಾಂಶಿ ಎಚ್ಚರಗೊಂಡು ಅಸ್ವಸ್ಥಳಾಗಿದ್ದಳು. ಆದರೆ ಪಿಹು ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.
ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಪಿಹು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅಸ್ವಸ್ಥಗೊಂಡಿದ್ದ ದಿವ್ಯಾಂಶಿಗೆ ಚಿಕಿತ್ಸೆ ನೀಡಲಾಗಿದ್ದು, ಇದೀಗ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಕರಧನಿ ಪೊಲೀಸರು ನೂಡಲ್ಸ್ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ನಿರೀಕ್ಷೆಯಿದೆ.
ಇನ್ನು ಮೃತ ಬಾಲಕಿಯ ಸಹೋದರ ಗೋವಿಂದ್ ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


