Karnataka NewsLatestPolitics

*ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಜಿಲ್ಲಾಧಿಕಾರಿಗಳೇ ಖಾತೆ ಮಾಡಿಕೊಡಲು ಅಧಿಕಾರಿಯೊಬ್ಬ ಲಂಚ ಕೇಳಿದ್ದು ನಿಜವಾದರೆ ಅದರ ಬಗ್ಗೆ ಪರಿಶೀಲನೆ ನಡೆಸಿ ಆತನನ್ನು ಬಲಿ ಹಾಕಿ” ಎಂದು ಸಿಎಂ ಡಿ‌ ಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದರು.

ಹಿರಿಯೂರು ತಾಲ್ಲೂಕಿನ ಕೆ ಎಂ ಕೊಟ್ಟಿಗೆ ಎಕೆ ಕಾಲೋನಿಯ ಕೆ ಚಂದ್ರು ‘ಖಾತೆ ಲಂಚ’ದ ಬಗ್ಗೆ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶನಿವಾರ ದೂರಿದಾಗ ಸಿಎಂ ಕಿಡಿ, ಕಿಡಿಯಾದರು. “ಜಿಲ್ಲಾಧಿಕಾರಿಗಳೇ ಹಾಗೂ ಉಪವಿಭಾಗಾಧಿಕಾರಿಗಳೇ, ಇವತ್ತೇ ಈ ಬಗ್ಗೆ ತೀರ್ಮಾನ ಆಗಬೇಕು. ಲಂಚ ಕೇಳಿರುವುದು ನಿಜವೆಂದು ಗೊತ್ತಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಂತಹವರನ್ನು ಬಿಡಬಾರದು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಿರಿಯೂರಿನಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಸಿಎಂ ಅವರು ಜನರ ಅಹವಾಲು ಸ್ವೀಕರಿಸಿದರು. ಅನೇಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಸೂಚಿಸಿದರು.

ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿಯಿಲ್ಲದೆ ಪರದಾಡುತ್ತಿದ್ದೇವೆ. ಗರ್ಭಿಣಿಯರು ಬಸ್ ಗಳಿಗಾಗಿ ಹೆದ್ದಾರಿಯ ಬೈಪಾಸ್ ಬಳಿ ಕಾಯುತ್ತಿದ್ದರೂ ಬಸ್ ನಿಲ್ಲಿಸುತ್ತಿಲ್ಲ. ಸ್ವಾಮಿ, ನನಗೆ 85 ವರ್ಷ, ಸ್ವಲ್ಪ ತುಂಡು ಭೂಮಿ ಕೊಡಿ. ಶಾಲಾ ಕಟ್ಟಡವಿಲ್ಲ… ಹೀಗೆ ಹತ್ತಾರು ಜನಸಾಮಾನ್ಯರ ಸಂಕಷ್ಟಗಳು ಸಿಎಂ ಎದುರು ಅನಾವರಣಗೊಂಡವು.

“ಅಮ್ಮ ನನಗೆ ಕೈ ಮುಗೀಬೇಡಿ‌. ನಾವು ನಿಮಗೆ ಕೈ ಮುಗಿಯಬೇಕು. ಸಮಸ್ಯೆ ಏನು ಅಂತ ಹೇಳಿ” ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕೈಮುಗಿದ ಹಿರಿಯ ಜೀವಗಳ ಬಳಿ ಸಿಎಂ ಪ್ರಾರ್ಥಿಸಿದರು.

ತಾಯಿ ಟೆನ್ಷನ್ ಮಾಡಿಕೊಳ್ಳಬೇಡಿ

“ಸ್ವಾಮಿ ನಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಹೋಗುವುದು ಬೇಡ. ನಮಗೆ ಜಮೀನು ಕಳೆದುಕೊಳ್ಳುವ ಭಯ ಎದುರಾಗಿದೆ ಎಂದು ಯರಿಚಿಕ್ಕನಹಳ್ಳಿಯ ಮಾನಸ ಹಾಗೂ ರವಿ ಎಂಬುವರು ಸಿಎಂ ಎದುರಿನ ಮೇಜಿನ ಮೇಲೆ ತಲೆಯಿಟ್ಟು ಬೇಡಿ ಕೊಂಡರು. ತಾಲೂಕಿನ 22 ಗ್ರಾಮಗಳ ಮೇಲೆ ಹಾದುಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಗಳಿಂದ ಅಡಿಕೆ ತೋಟಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ತಾಯಿ, ಹೈಟೆನ್ಷನ್ ವಿದ್ಯುತ್ ಮಾರ್ಗ ಹೋಗುತ್ತೆ ಎಂದು ಟೆನ್ಷನ್ ಮಾಡಿಕೊಳ್ಳಬೇಡಿ. ನಾನು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ” ಎಂದು ಹೇಳಿದರು‌. ಎರಡು ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸೋದಿಲ್ಲ

ಪತ್ರಿಕಾ ವಿತರಕರಾದ ಏಕಾಂತಪ್ಪ ಅವರು, “ಮುಖ್ಯಮಂತ್ರಿಯವರೇ ಕೆಎಸ್ ಆರ್ ಟಿಸಿ ಬಸ್ ಗಳು ಪಟ್ಟಣದ ಒಳಗಡೆ ಬರದೇ ಬೈಪಾಸ್ ನಲ್ಲಿ ನಿಲ್ಲಿಸುತ್ತಿವೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಪಟ್ಟಣದೊಳಗೆ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

“ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸೋದಿಲ್ಲ? ಮಾನವೀಯತೆ ಇಲ್ಲವೆ? ಕೂಡಲೇ ಈ ಸಮಸ್ಯೆ ಬಗೆಹರಿಸಿ ನನಗೆ ವಿಚಾರ ತಿಳಿಸಬೇಕು. ಏಕೆ ಬಸ್ ನಿಲ್ಲಿಸೋದಿಲ್ಲ. ಈ ಸಮಸ್ಯೆ ಮತ್ತೆ, ಮತ್ತೆ ಪುನರಾವರ್ತನೆ ಆಗಬಾರದು” ಎಂದು ಕೆಎಸ್ ಆರ್ ಟಿಸಿ ವಿಭಾಗ ಅಧಿಕಾರಿಗೆ ಸಿಎಂ ಸೂಚಿಸಿದರು.

ನಿಮಗೆ ಭೂಮಿ ಮಂಜೂರು ಮಾಡಿ ಕೊಡಲಾಗುವುದು

ನನಗೆ ಭೂಮಿ ಇಲ್ಲ. ಏನಾದರೂ ದಾರಿ ಮಾಡಿಕೊಡಿ ಎಂದು ಕಸವನಹಳ್ಳಿಯ 85 ವರ್ಷದ ಲಕ್ಷ್ಮಮ್ಮ ಅವರು ಸಿಎಂ ಕೈ ಹಿಡಿದು ಕೇಳಿದಾಗ, ಅಜ್ಜಿ ನಿಮಗೆ ಭೂಮಿ ಮಂಜೂರು ಮಾಡಿ ಕೊಡುತ್ತೇವೆ. ಉಳುವವನಿಗೆ ಭೂಮಿ ನೀಡಿದ ಪಕ್ಷ ನಮ್ಮದು ಅಜ್ಜಿ ಲಕ್ಷ್ಮಮ್ಮ ಅವರ ಮುಖದಲ್ಲಿ ನಗು ಮೂಡಿತು.

15 ಹೊಲಗಳಿಗೆ ದಾರಿಯೇ ಇಲ್ಲ

ತಹಶಿಲ್ದಾರ್ ಗೆ ಅರ್ಜಿ ಸಲ್ಲಿಸಿದ್ದರೂ 10 ರಿಂದ 15 ಹೊಲಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಶಾಲೆಗೆ ಕಟ್ಟಡವಿಲ್ಲ, ಎಲ್ ಕೆಜಿಗೂ ಅವಕಾಶವಿಲ್ಲ!

ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕೊರತೆಯಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ ಕೆಜಿ ಆರಂಭಿಸಲು ಅವಕಾಶ ಕಲ್ಪಿಸಬೇಕು. ಈ ಕುರಿತು ಡಿಡಿಪಿಐ ಎರಡು ಬಾರಿ ಭೇಟಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರಸನ್ನ ಎಂಬುವರು ದೂರಿದರು. ತಕ್ಷಣ ಸ್ಪಂದಿಸಿದ ಸಿಎಂ, ಡಿಡಿಪಿಐ ಅವರನ್ನು ಕರೆದು “ಅರ್ಜಿ ಪಡೆದು ಮೊದಲು ಕೆಲಸ ಮಾಡಿಕೊಡಿ” ಎಂದು ಸೂಚಿಸಿದರು.

ವಕೀಲರ ಭವನಕ್ಕೆ ಅನುದಾನ ನೀಡಿ

ಹಿರಿಯೂರಿನಲ್ಲಿ ಸುಮಾರು 250 ಕ್ಕೂ ಹೆಚ್ಚು ವಕೀಲರಿದ್ದು, ವಕೀಲರ ಭವನ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ. ಭವನ ನಿರ್ಮಾಣಕ್ಕೆ 3 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ವಕೀಲರ ಪ್ರತಿನಿಧಿಗಳು ಮನವಿ ಮಾಡಿದರು.

ಮಹಿಳೆಯರಿಗೆ ಉದ್ಯಾನವನ, ಸಾರ್ವಜನಿಕರಿಗೆ ಶೌಚಾಲಯ

ಧರ್ಮಪುರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಹಿರಿಯೂರಿನಲ್ಲಿ ಇಂದಿರಾ ಗಾಂಧಿ ಉದ್ಯಾನವನ ನಿರ್ಮಿಸಿ ಮಹಿಳೆಯರಿಗೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

ಮನೆ ನಿರ್ಮಾಣದ ಬಿಲ್ ಬಾಕಿ

ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಬಿಲ್ ಗಳು ಬಾಕಿ ಉಳಿದಿವೆ ಎಂದು ಫಲಾನುಭವಿಗಳು ಗಮನ ಸೆಳೆದರು. “ಅರ್ಜಿ ಸಲ್ಲಿಸುವಲ್ಲಿ ಲೋಪವಾಗಿದ್ದರೆ ಅರ್ಜಿ ಪಡೆದು ಸಮಸ್ಯೆ ಬಗೆಹರಿಸಿ” ಎಂದು ಸಿಎಂ ಸೂಚಿಸಿದರು.

ಅರ್ಜಿದಾರನೊಂದಿಗೆ ಸೆಲ್ಫಿ: ಯುವಕನ ಮುಖದಲ್ಲಿ ಮಂದಹಾಸ

ಅಲೆಮಾರಿ ಸಮುದಾಯದವರಿಗೆ ಮನೆಗಳಿಲ್ಲ, ವಾಸಿಸಲು ಸೂರಿಲ್ಲ ಎಂದು ಅರ್ಜಿ ಹಿಡಿದು ಬಂದಿದ್ದ ಯುವಕನ ಅಹವಾಲನ್ನು ಆಲಿಸಿದ ಶಿವಕುಮಾರ್ ಅವರು ಆತನ ಅಸಹಾಯಕತೆ ಅರಿತು, “ಆಯ್ತು ಬಿಡಪ್ಪ, ಕೊಡಿಸೋಣ. ನಾನಿದ್ದೇನೆ ಯಾವುದೇ ಚಿಂತೆ ಬೇಡ” ಎಂದು ಭರವಸೆ ನೀಡಿದರು. ತಕ್ಷಣ ಯುವಕನ ಮೊಬೈಲ್ ಪಡೆದು, ಆತನೊಂದಿಗೆ ತಾವೇ ಸೆಲ್ಫಿ ಕ್ಲಿಕ್ಕಿಸಿದರು. ಮುಖ್ಯಮಂತ್ರಿಗಳೇ ಸೆಲ್ಫಿ ತೆಗೆದದ್ದು ನೋಡಿ ಯುವಕನ‌ ಮುಖದಲ್ಲಿ ಮಂದಹಾಸ ಮೂಡಿತು.

ಹೊಸ ಎಳನಾಡಿನ ನಿವಾಸಿ, ಮಾಜಿ ಸೈನಿಕ ವೆಂಕಟೇಶ್ ಅವರು “ನಾನು ದೇಶಸೇವೆ ಮಾಡಿದ್ದೇನೆ ನಿವೇಶನ ಕೊಡಿ” ಎಂದು ಮನವಿ ಮಾಡಿದರು. ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದೇನೆ. ಸಿಎಂ ಫಂಡ್ ಇಂದ ದುಡ್ ಕೊಡಬೋದಂತೆ. ಸಹಾಯ ಮಾಡಿ ಎಂದು ಈಶ್ವರಗೆರೆಯ ಸುರೇಶ್ ಎಂಬುವರು ಮನವಿ ಮಾಡಿದಾಗ, “ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಹೇಳುತ್ತೇನೆ” ಎಂದರು.

ಕ್ಲೌಡ್ ಕಿಚನ್ ಬೇಡ. ಬಿಸಿಯೂಟ ನೌಕರರನ್ನು ರಕ್ಷಿಸಿ ಎಂದು ನಿಂಗಮ್ಮ ಎಂಬುವರು ಮನವಿ ಸಲ್ಲಿಸಿದರೆ, ಜಿ ಎನ್ ಕೋಟೆ ಕೆರೆಗೆ ಭದ್ರಾ ನೀರು ಹರಿಸಿ ಎಂದು ರೈತ ಸಂಘದ ಮಂಜುನಾಥ್, ಪಾಯಯ್ಯ, ಶಿವಕುಮಾರ್ ಎಂಬುವರು ಮನವಿ ಸಲ್ಲಿಸಿದರು.

Related Articles

Back to top button