Kannada NewsLatestNational

*ಹೈದರಾಬಾದ್‌ನಲ್ಲಿ 26/11 ಮಾದರಿಯ ದಾಳಿ ಬೆದರಿಕೆ*: *ಹೈ ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಹೈದರಾಬಾದ್‌ನಲ್ಲಿ ನವೆಂಬರ್ 26ರಂದು 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾದರಿಯಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.

ಇ-ಮೇಲ್ ಮೂಲಕ ಇಂತದ್ದೊಂದು ಬೆದರಿಕೆ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಹೈದರಾಬಾದ್ ನಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ, ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಕಾಚಿಗುಡ ರೈಲು ನಿಲ್ದಾಣ ಮತ್ತು ಅಲ್ಲಿನ ಹೋಟೆಲ್ ಟೂರಿಸ್ಟ್ ಪ್ಲಾಜಾವನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ನಡೆಸುವುದಾಗಿ ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ದಾಳಿಗಳಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಬಹುದು ಎಂದೂ ಸಂದೇಶದಲ್ಲಿ ಹೇಳಲಾಗಿದೆ.

ನವೆಂಬರ್ 21ರಂದು ಹೈದರಾಬಾದ್ ಪೊಲೀಸರಿಗೆ ಈ ಇಮೇಲ್ ಬಂದಿದ್ದು, ಅದನ್ನು ಕಳುಹಿಸಿದವರು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಇತ್ತೀಚೆಗೆ ಲಷ್ಕರ್ ಉಗ್ರ ಲತೀಫ್ ಭಟ್ ಹತ್ಯೆಯಾದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ದಾಳಿ ನಡೆಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಇಮೇಲ್‌ನಲ್ಲಿ ಕಾಚಿಗುಡ ರೈಲು ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ನವೆಂಬರ್ 26ರಂದೇ 2008ರ ಮುಂಬೈ ದಾಳಿಯ ಮಾದರಿಯಲ್ಲಿ ಹೈದರಾಬಾದ್‌ನಲ್ಲೂ ದಾಳಿ ನಡೆಸುವುದಾಗಿ ಸಂದೇಶದಲ್ಲಿ ಹೇಳಲಾಗಿದೆ. ಆದರೆ, ಈ ಬೆದರಿಕೆ ನಿಜವಾಗಿಯೂ ಲಷ್ಕರ್ ಸಂಘಟನೆಯಿಂದ ಬಂದಿದೆಯೇ ಅಥವಾ ಯಾರಾದರೂ ಸಂಘಟನೆಯ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸ್ ವಿಶೇಷ ಶಾಖೆ ಹಿರಿಯ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಕಾಚಿಗುಡ ರೈಲು ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪೊಲೀಸರು ಅನುಮಾನಿತ ಸ್ಥಳಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡಗಳ ಮೂಲಕ ತಪಾಸಣೆ ನಡೆಸಿದ್ದಾರೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಹೋಟೆಲ್‌ಗಳು, ಧಾರ್ಮಿಕ ಸ್ಥಳಗಳು, ಜನದಟ್ಟಣೆ ಇರುವ ಪ್ರದೇಶಗಳು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿಯೂ ನಿಗಾ ಹೆಚ್ಚಿಸಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳು, ವಾರಸುದಾರರಿಲ್ಲದ ವಸ್ತುಗಳು, ವಾಹನಗಳು ಮತ್ತು ಅಸಹಜ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ. ಗಸ್ತು ಹೆಚ್ಚಿಸುವುದರ ಜೊತೆಗೆ ಇತರ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ನಿರ್ದೇಶನ ನೀಡಲಾಗಿದೆ.

Related Articles

Back to top button