Film & EntertainmentKannada NewsKarnataka NewsLatest

*ದರ್ಶನ್ ಪ್ರಕರಣದಲ್ಲಿ ಇದ್ದಕ್ಕಿದ್ದಂತೆ ಬದಲಾದ ಸಾಕ್ಷಿಗಳ ನಡೆ*: *ಕೋರ್ಟ್‌ನಲ್ಲಿ ನಡೆದಿದ್ದೇನು?*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದ ಇಬ್ಬರು ಇದೀಗ ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೂ ಕೋರ್ಟ್‌ನಲ್ಲಿ ನೀಡಿದ ಸಾಕ್ಷ್ಯಕ್ಕೂ ವ್ಯತ್ಯಾಸ ಕಂಡುಬಂದಿದೆ. ಈಗಾಗಲೇ ಮೂವರು ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿದ್ದ ಬೆನ್ನಲ್ಲೇ ಮತ್ತಿಬ್ಬರು ಅದೇ ಹಾದಿ ಹಿಡಿದಿದ್ದಾರೆ. ಇದರಿಂದ ಪ್ರಕರಣದ ವಿಚಾರಣೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಹಾಗೂ ಶೆಡ್‌ನಲ್ಲಿ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವಿಜಯ್ ಕುಮಾರ್ ಇಂದು ನ್ಯಾಯಾಲಯದ ವಿಚಾರಣೆ ವೇಳೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

ಕೃತ್ಯ ನಡೆದ ದಿನ ತಾನು ಶೆಡ್‌ನಲ್ಲಿ ಏನನ್ನೂ ನೋಡಿಲ್ಲ. ಈ ಘಟನೆಯ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಪ್ರತ್ಯಕ್ಷ ಸಾಕ್ಷಿಯಾಗಿದ್ದ ಮಲ್ಲಿಕಾರ್ಜುನ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಇನ್ನು ವಿಜಯ್ ಕುಮಾರ್ ಕೂಡ, ತಮಗೆ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ತಾನು ಕಚೇರಿಯಿಂದ ಹೊರಗೆ ಬಂದೇ ಇಲ್ಲ. ಹೊರಗೆ ನಡೆದ ಘಟನೆಯ ಅರಿವಿಲ್ಲ. ತಾನು ಯಾರನ್ನೂ ನೋಡಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಶೆಡ್‌ನಲ್ಲಿ ಏನೂ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿದ್ದರು. ಇದೀಗ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೂಡ ತಮ್ಮ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. ಇದರೊಂದಿಗೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ನಾಲ್ವರು ಸಾಕ್ಷಿಗಳು ಪ್ರಾಸಿಕ್ಯೂಷನ್‌ಗೆ ಪ್ರತಿಕೂಲವಾಗಿದ್ದಾರೆ.

ಇಬ್ಬರು ಸಾಕ್ಷಿಗಳು ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹಿನ್ನೆಲೆಯಲ್ಲಿ, ಅವರನ್ನು ಪ್ರತಿಕೂಲ ಸಾಕ್ಷಿಗಳೆಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಮಲ್ಲಿಕಾರ್ಜುನ್ ಹಾಗೂ ವಿಜಯ್ ಕುಮಾರ್ ಅವರ ಪಾಟಿಸವಾಲಿಗೆ ಡಿಸೆಂಬರ್ 3ರಂದು ಅವಕಾಶ ನೀಡಿದೆ. ಈ ಮೂಲಕ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

Related Articles

Back to top button