Kannada NewsKarnataka NewsLatest

*ಹಾಲುಣಿಸುವ ತಾಯಂದಿರಿಗೆ ಸರ್ಕಾರದಿಂದ ಮಹತ್ವದ ನೆರವು*: *ಉಚಿತ ಪೌಷ್ಟಿಕಾಂಶ ವಿತರಣೆಗೆ ಚಾಲನೆ*

ಚಿಕ್ಕಬಳ್ಳಾಪುರ: ತಾಯಿ ಮತ್ತು ಮಗುವಿನ ಆರೋಗ್ಯವನ್ನು ಬಲಪಡಿಸುವ ಉದ್ದೇಶದಿಂದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಹಾಲುಣಿಸುವ ತಾಯಂದಿರಿಗಾಗಿ ರೂಪಿಸಿರುವ ಉಚಿತ ಪೌಷ್ಟಿಕಾಂಶ ವಿತರಣೆ ಯೋಜನೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಬುಧವಾರ ಚಾಲನೆ ನೀಡಿದರು.

ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಸಾನ್ನಿಧ್ಯದಲ್ಲಿ ಸಚಿವರು ಸಾಯಿ ಶ್ಯೂರ್ ಮಲ್ಟಿನ್ಯೂಟ್ರಿಯಂಟ್ ಸಪ್ಲಿಮೆಂಟ್‌ (ಬಹುಪೋಷಕಾಂಶ ಪೂರಕ) ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಾದ ಯಶಸ್ವಿನಿ ಮತ್ತು ಸಂಗೀತಾ ಅವರಿಗೆ ಪೌಷ್ಟಿಕಾಂಶ ಪೂರಕ ವಿತರಿಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ತಿಂಗಳು 1,500 ಹಾಲುಣಿಸುವ ತಾಯಂದಿರಿಗೆ ಸಾಯಿ ಶ್ಯೂರ್ ಪೌಷ್ಟಿಕಾಂಶವನ್ನು ಉಚಿತವಾಗಿ ಒದಗಿಸುವ ಗುರಿ ಹೊಂದಲಾಗಿದೆ. ತಾಯಂದಿರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವುದರ ಜತೆಗೆ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗುವುದು ಯೋಜನೆಯ ಉದ್ದೇಶವಾಗಿದೆ.

ಸರ್ಕಾರದಿಂದ ಸಹಕಾರದ ಭರವಸೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭಿಸಿರುವ ಈ ಪ್ರಾಯೋಗಿಕ ಯೋಜನೆ ಫಲಿತಾಂಶದ ಆಧಾರದ ಮೇಲೆ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಮಾರ್ಗದರ್ಶನದಲ್ಲಿ ಉಚಿತ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಉಪಾಹಾರ ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಸೇವಾ ಚಟುವಟಿಕೆಗಳು ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತರ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ

ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ನೆರವು ಒದಗಿಸುವ ಈ ಯೋಜನೆಯು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಇಂತಹ ಜನಪರ ಉಪಕ್ರಮಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವಿದೆ ಎಂದು ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ್ ಸಾಯಿ ಹೇಳಿದರು.

5 ಲಕ್ಷ ಗುರಿ

ಸಾಯಿ ಶ್ಯೂರ್‌ನ ಪಯಣ ಹಾಗೂ ಯೋಜನೆಯ ಉದ್ದೇಶವನ್ನು ವಿವರಿಸಿದ ಅನ್ನಪೂರ್ಣ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಕಡಲಿ, ಈ ಯೋಜನೆಯು ತಾಯಿ, ಮಗು ಮತ್ತು ರೈತರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಆಶಯ ಹೊಂದಿದೆ. ಅಲ್ಲದೇ ಐದು ಲಕ್ಷ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ನೆರವು ಒದಗಿಸುವ ಉದ್ದೇಶದೊಂದಿಗೆ ಈ ಉಪಕ್ರಮವನ್ನು ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Related Articles

Back to top button