Belagavi NewsBelgaum NewsKannada NewsKarnataka News

*ಸಮಾಜಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ*: *ಮುನ್ನಾ ಬಾಗವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಗುರುತಿಸಿ, ಗೌರವಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜಮುಖಿ ಕಾರ್ಯಕರ್ತರಿಗೆ ಸಾರ್ವಜನಿಕರು ಬೆಂಬಲ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ ಅಭಿಪ್ರಾಯಪಟ್ಟರು.

ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನ. 29ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ರೈತ ಸಂಭ್ರಮೋತ್ಸವ–2026’ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ರಾಷ್ಟ್ರೀಯ ಸಮಾಜ ಸೇವಾ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಚಿರಾಯು ಕನ್ನಡ ವಾಹಿನಿ, ಧಾರವಾಡದ ಪ್ರತಿಫಲ ಫೌಂಡೇಶನ್ (ರಿ) ಹಾಗೂ ಅಲೆಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್ ಆಫ್ ಕರುನಾಡ, ಮೈಸೂರು ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಲಬ್ ಅಧ್ಯಕ್ಷ ಡಾ. ಟಿ. ತ್ಯಾಗರಾಜ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದ ಮುನ್ನಾ ಬಾಗವಾನ, ಚಿರಾಯು ಕನ್ನಡ ವಾಹಿನಿ, ಪ್ರತಿಫಲ ಫೌಂಡೇಶನ್ ಹಾಗೂ ಅಲೆಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್ ಸಮಾಜಮುಖಿ ಕಾರ್ಯಗಳ ಮೂಲಕ ಉತ್ತಮ ಪರಂಪರೆಯನ್ನು ಬೆಳೆಸುತ್ತಿವೆ. ಸಾಧಕರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಸಮಾಜಸೇವಕರಿಗೆ ಮತ್ತಷ್ಟು ಪ್ರೇರಣೆ ನೀಡುವುದರ ಜತೆಗೆ ಯುವಜನರಲ್ಲಿ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ. ಈ ಪ್ರಶಸ್ತಿಯ ಮೂಲಕ ಮೈಸೂರು ಮತ್ತು ಉತ್ತರ ಕರ್ನಾಟಕದ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿರುವುದು ಸಂತಸದ ಸಂಗತಿ ಎಂದರು.

ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಡಾ. ಟಿ. ತ್ಯಾಗರಾಜ, ಮಂಜುನಾಥ ಸೇರಿದಂತೆ ಎಲ್ಲ ಸಮಾಜಸೇವಕರ ಕಾರ್ಯಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು. ಸಮಾಜಕ್ಕಾಗಿ ದುಡಿಯುವವರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಯುವಜನರಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ಆಧುನಿಕ ಯುಗದಲ್ಲಿ ಯುವಜನರಲ್ಲಿ ಪುಸ್ತಕ ಓದುವ ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮೊಬೈಲ್ ಬಳಕೆಯ ಜತೆಗೆ ಪುಸ್ತಕ ಓದುವಿಕೆ, ಜ್ಞಾನಾರ್ಜನೆ ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಹವ್ಯಾಸವನ್ನೂ ಬೆಳೆಸಿಕೊಳ್ಳಬೇಕು. ಓದುವಿಕೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಯುವಜನರು ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು ಎಂದು ಮುನ್ನಾ ಬಾಗವಾನ ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿಯೂ ವಿಫುಲ ಅವಕಾಶಗಳಿವೆ

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಯುವಕರು ಕೇವಲ ಸರ್ಕಾರಿ ಉದ್ಯೋಗವನ್ನೇ ಗುರಿಯಾಗಿಸಿಕೊಳ್ಳದೆ ಎಲ್ಲ ಕ್ಷೇತ್ರಗಳಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿಯೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಕೃಷಿಗೆ ಆದ್ಯತೆ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ರೈತರ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ರೈತರನ್ನು ಪ್ರೋತ್ಸಾಹಿಸುವ ಹಾಗೂ ಕೃಷಿಯ ಮಹತ್ವ ಸಾರುವ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ JDMCS ನಿರ್ದೇಶಕರು ಹಾಗೂ ಪೈ ಕೋಚಿಂಗ್ ಬ್ರಿಡ್ಜ್ ಅಧ್ಯಕ್ಷ ಮಧುಸೂದನ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡಪ್ರಭ ದಿನಪತ್ರಿಕೆಯ ಮೈಸೂರು ಸಂಪಾದಕ ಕಂಚಿ ಪ್ರಸನ್ನ, ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಎಂ.ಜಿ. ಮಂಜುನಾಥ್, ಬೆಳಗಾವಿಯ ಎಸ್.ವಿ. ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಎಚ್.ಆರ್., ಎಸ್‌ಬಿಐ ನಿವೃತ್ತ ಮುಖ್ಯ ವ್ಯವಸ್ಥಾಪಕ ಅನಂತ ಪದ್ಮನಾಭ, ಹಿರಿಯ ಅಧಿಕಾರಿಗಳಾದ ಶಿವಶಂಕರ್ ಹಾಗೂ ಶಿವಮೊಗ್ಗ ಎಸ್‌ಬಿಐ ವ್ಯವಸ್ಥಾಪಕ ಶಶಿಧರ್ ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಸಮನ್ವಿ, ಶ್ರೇಯಾ ಹಾಗೂ ಮಯೂರಿ ಪ್ರಾರ್ಥಿಸಿದರು. ಕಾವ್ಯಶ್ರೀ ಎನ್. ಸ್ವಾಗತಿಸಿದರು. ಕುಮಾರಿ ಅನನ್ಯ ಮಹದೇವಸ್ವಾಮಿ ಸೇರಿದಂತೆ ಮೈಸೂರು ಮತ್ತು ಬೆಂಗಳೂರಿನ ವಿವಿಧ ನೃತ್ಯ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, ಸಮಾಜಸೇವಕರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

Related Articles

Back to top button