Kannada NewsKarnataka NewsLatest

ತಪ್ಪು ಸಂದೇಶ ನೀಡಿದರೆ ಕ್ರಿಮಿನಲ್ ಕೇಸ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊರೊನಾ ಸೋಂಕನ್ನು ಸಾಮಾಜಿಕ ಸಮಸ್ಯೆ ಎಂದು ಭಾವಿಸಿ ಸೋಂಕು ನಿಯಂತ್ರಣ ಮಾಡಬೇಕು. ಆ ದಿಶೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಮಾ.೧೩) ನಡೆದ ಜಿಲ್ಲಾಮಟ್ಟದ ಕರೊನಾ ವೈರಸ್ ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಸಾವು ಉಂಟಾಗಿದೆ. ಕೊರೊನಾ ವೈರಸ್ ಬಗ್ಗೆ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದು, ಆರೋಗ್ಯ ಇಲಾಖೆ ಸರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸೋಂಕು ಹರಡದಂತೆ ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜನರಲ್ಲಿರುವ ತಪ್ಪು ಮಾಹಿತಿಗಳನ್ನು ಮೊದಲು ಹೊಗಲಾಡಿಸುವುದು ನಮ್ಮ ಜವಾಬ್ದಾರಿ. ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮ ಅಥವಾ ಕೆಲಸ ಎಂದು ಭಾವಿಸದೆ ಇದನ್ನು ಸಾಮಾಜಿಕ ಸಮಸ್ಯೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕು.
ಕೊರೊನಾ ಸೋಂಕನ್ನು ಹತೊಟೆಗೆ ತರಲು ಖಾಸಗಿ ವೈದ್ಯರ ಪಾತ್ರವು ಬಹಳ ಮುಖ್ಯವಾಗಿದೆ. ಯಾವದೇ ವ್ಯಕ್ತಿಗೆ ಆರೋಗ್ಯದ ತೊಂದರೆ ಆದರೆ ಸಾಮಾನ್ಯವಾಗಿ ಜನರು ಖಾಸಗಿ ವೈದ್ಯರ ಹತ್ತಿರ ಹೋಗಿ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಅದಕ್ಕಾಗಿ ಕೊರೊನಾ ವೈರಸ್ ಲಕ್ಷಣಗಳು ಇರುವ ರೋಗಿಗಗಳು ಖಾಸಗಿ ಆಸ್ಪತ್ರೆಗಳಲ್ಲಿ ಬಂದರೆ ಆ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು ಎಂದು ಹೇಳಿದರು.
ವೈದ್ಯಕೀಯ ತಪಾಸಣೆ ಮಾಡಿಸಿರುವ ರಸೀದಿಗಳು ಇದ್ದರೆ ಮಾತ್ರ ಔಷಧಿ ಅಂಗಡಿಗಳು ಔಷಧಿ ನೀಡಬೇಕು. ಮಾಸ್ಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದಕ್ಕಾಗಿ ನಾವು ಜವಾಬ್ದಾರಿ ಸ್ಥಾನದಲಿದ್ದು, ಅನಾಹುತಗಳು ಆಗುವುದಕ್ಕೆ ಅವಕಾಶ ನೀಡಬಾರದು. ಹೋಟೆಲ್ ಗಳಲ್ಲಿ ವಿದೇಶದಿಂದ ಪ್ರವಾಸಿಗರು ಬಂದು ವಾಸ ಮಾಡಿದರೆ ಹೋಟೆಲ್ ಮಾಲೀಕರು ಅವರ ಮಾಹಿತಿಯನ್ನು ನೀಡಬೇಕು. ವಿದೇಶದಿಂದ ಭಾರತಿಯರು ಬಂದರೆ ಟ್ರಾವೆಲರ್ಸ್‌ಗಳು ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ಒದಗಿಸಬೇಕು ಎಂದು ಸೂಚನೆ ನೀಡಿದರು.
ಕೊರೊನಾ ಸೋಂಕು ಯಾರಿಗಾದರೂ ಇದ್ದರೆ ಅಂತವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಂತವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ಸೋಂಕಿತರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸರ್ಕಾರ ನೀಡಿರುವ ನಿರ್ದೆಶನದಂತೆ ಜಿಲ್ಲಾಸ್ಪತ್ರೆಯಲ್ಲಿ ಐಸೊಲೇಷನ ವಾರ್ಡ್ ನಿರ್ಮಾಣ ಮಾಡಲಾಗಿದೆ. ಕೊರೊನಾ ವೈರಸ್ ತಡೆಯಲು ಸಾಧ್ಯವಾದಷ್ಟು ಸಾರ್ವಜನಿಕ ಸಮಾರಂಭಗಳನ್ನು ಕಡಿಮೆ ಮಾಡಬೇಕು. ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಾಕಿದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ಹೇಳಿದರು.
ಬಳಿಕ ಮಾತನಾಡಿ ಜಿಲ್ಲಾಪಂಚಾಯತ ಸಿ.ಇ.ಒ ಡಾ. ರಾಜೇಂದ್ರ ಕೆ.ವಿ ಅವರು, ಕರೊನಾ ಸೋಂಕು ಹರಡದಂತೆ ತಡೆಯಲು ತಾಲೂಕು ಆಸ್ಪತ್ರೆಯವರು ಲೈಸನ್ಸ್ ಹೊಂದಿರುವ ಕ್ಲಿನಿಕ್ ಗಳ ಸಭೆಯನ್ನು ಮಾಡಿ ಅವರ ಕ್ಲಿನಿಕ್ ಗಳಿಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವುದು ಪ್ರತಿಯೊಬ್ಬ ವೈದ್ಯರ ಕೆಲಸವಾಗಿದೆ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೈ ತೊಳೆಯುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯತಿಗಳು ಮಾಡಬೇಕು. ಔಷಧಿ ಅಂಗಡಿಗಳು ವೈದ್ಯರ ರಷೀದಿ ಇಲ್ಲದೆ ಔಷಧಿಗಳನ್ನು ನೀಡಿದರೆ ಅಂತವರ ಲೈಸನ್ಸ್ ರದ್ದು ಮಾಡಲಾಗುವದು ಮತ್ತು ಕರೊನಾ ಪ್ರಕರಣಗಳು ಕಂಡು ಬಂದರೆ ೧೦೪ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು.
ವಿದೇಶದಿಂದ ನಿಮ್ಮ ಅಕ್ಕಪಕ್ಕ ಮನೆಯವರು ಯಾರಾದರು ಬಂದಿದ್ದರೆ ಮಾಹಿತಿ ನೀಡಿ. ಈಗಾಗಲೇ ಜಿಲ್ಲಾಧಿಕಾರಿಗಳು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭೇಟಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾಡಳಿತದೊಂದಿಗೆ ಎಲ್ಲರೂ ಕೈ ಜೊಡಿಸಿದರೆ ಕೊರೊನಾ ವೈರಸ್ ನಿಯಂತ್ರಣ ಸಾಧ್ಯ ಎಂದು ಜಿಲ್ಲಾಪಂಚಾಯತ ಸಿ.ಇ.ಒ ಡಾ. ರಾಜೇಂದ್ರ ಕೆ.ವಿ ಅವರು ಅಭಿಪ್ರಾಯ ಪಟ್ಟರು.
ಬಳಿಕ ಕರೊನಾ ವೈರಸ್ ಸಂಬಂಧಿಸಿದಂತೆ ಮಾಹಿತಿ ನೀಡಿದ ಡಾ. ಸಿದ್ದಲಿಂಗಯ್ಯ ಅವರು, ೨೦೧೯ ಡಿಸೆಂಬರ್ ತಿಂಗಳಿನಲ್ಲಿ ಕೊರೊನಾ ಸೋಂಕು ಚೀನಾ ದೇಶದಲ್ಲಿ ಕಂಡು ಬಂದಿದ್ದು, ೨೦೨೦ ಜನವರಿ ತಿಂಗಳಲ್ಲಿ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ. ಜನವರಿ ೩೦ ರಂದು ಭಾರತದ ಕೆರಳ ರಾಜ್ಯದಲ್ಲಿ ಮೊದಲ ಕೊರೊನಾ ಪ್ರಕರಣ ಕಂಡು ಬಂದಿದೆ ಎಂದು ತಿಳಿಸಿದರು.
ಚೀನಾ ದೇಶದಿಂದ ಪ್ರಾರಂಭವಾದ ಕೊರೊನಾ ಸೋಂಕು ಜಗತ್ತಿನ ೧೧೩ ದೇಶಗಳನ್ನು ಆವರಿಸಿಕೊಂಡಿದೆ. ಸೋಂಕು ತಗುಲಿದ ವ್ಯಕ್ತಿಗೆ ಕೊರೊನಾ ವೈರಸ್ ಕಂಡು ಬರಲು ೨ ರಿಂದ ೧೪ ದಿನಗಳು ಬೇಕಾಗುತ್ತದೆ. ಯಾವುದೇ ವ್ಯಕ್ತಿ ಕೆಮ್ಮುವುದರಿಂದ ಹಾಗೂ ಸೀನುವುದರಿಂದ ಈ ವೈರಸ್ ಹರಡುತ್ತದೆ.
ಕೊರೊನಾ ವೈರಸ್ ತಪಾಸಣೆ ನಡೆಸಲು ರಾಜ್ಯದಲ್ಲಿ ಮೈಸೂರು, ಹಾಸನ ಬೆಂಗಳೂರುಗಳಲ್ಲಿ ಲ್ಯಾಬ್ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿಯು ಸಹ ಲ್ಯಾಬ್ ತೆರೆಯುವ ಚಿಂತನೆ ನಡೆದಿದೆ ಎಂದು ಡಾ. ಸಿದ್ದಲಿಂಗಯ್ಯ ಅವರು ಹೇಳಿದರು.
ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಮಾಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button