ಮೇ 26ರಂದು ಸವದತ್ತಿಯಲ್ಲಿ ಉಗ್ರ ಪ್ರತಿಭಟನೆಗೆ ನಿರ್ಧಾರ
ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಹೆಸ್ಕಾಂ ಅಧಿಕಾರಿಯ ಮೇಲೆ ಗುತ್ತಿಗೆದಾರನೋರ್ವ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಸವದತ್ತಿಯಲ್ಲಿ ನಡೆದಿದೆ.
ಸವದತ್ತಿ ಹೆಸ್ಕಾಂ ಉಪ ವಿಭಾಗದ ಎಇಇ ಸಿ.ಎಸ್.ಮಠಪತಿಯವರ ಮೇಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಗುತ್ತಿಗೆದಾರ ರವಿಕುಮಾರ ಕುಂಬಾರ ಮತ್ತು ಈತನ ತಂದೆ ಬಸಪ್ಪ ಕುಂಬಾರ ಹಲ್ಲೆ ಮಾಡಿದ್ದಾರೆ ಎಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗುತ್ತಿಗೆದಾರ ಹೆಸ್ಕಾಂ ಇಲಾಖೆಯ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಹೆಸ್ಕಾಂನ ಕೆಲಸಗಳನ್ನು ಮಾಡಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ಎಇಇ ಮುಖಾಂತರ ವರದಿಯನ್ನು ತರಿಸಿಕೊಂಡಿದ್ದರೆನ್ನಲಾಗಿದೆ. ಅನಧಿಕೃತವಾಗಿ ಮಾಡಿದ ಕೆಲಸಗಳ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಸಿಟ್ಟಿನಿಂದ ಗುತ್ತಿಗೆದಾರ ರವಿಕುಮಾರ ತಮ್ಮ ತಂದೆಯೊಂದಿಗೆ ಅಧಿಕಾರಿಗಳ ಮೇಲೆ ಅವ್ಯಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿರುವುದಾಗಿ ಅಭಿಯಂತರ ಸಿ.ಎಸ್.ಮಠಪತಿ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರಕಾರಿ ಅಧಿಕಾರಿಗಳ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ ತಾಲೂಕಿನ ಎಲ್ಲ ಹೆಸ್ಕಾಂ ಸಿಬ್ಬಂದಿ ಮೇ.೨೬ರಂದು ತಪ್ಪಿತಸ್ಥರ ಮೇಲೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಿದ್ದಾರೆ.
ರವಿಕುಮಾರ ಹೆಸ್ಕಾಂ ಗುತ್ತಿಗೆದಾರನಾಗಿದ್ದು, ಆತನ ತಂದೆ ಹೆಸ್ಕಾಂ ಲೈನ್ ಮನ್ ಆಗಿದ್ದರು. ಮೊದಲಿನಿಂದಲೂ ಇವರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತ ಬಂದಿರುವ ಆರೋಪವಿದೆ. ಅಧಿಕಾರಿಗಳು ನಿರ್ಭಯದಿಂದ ಕೆಲಸ ಮಾಡದಂತಹ ವಾತಾವರಣವನ್ನು ಸೃಷ್ಟಿಸಿರುವ ಆರೋಪ ಇವರ ಮೇಲಿದೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ