Kannada NewsLatest

ಸರ್ಕಾರದ ನೆರವು ಅರ್ಹರಿಗೆ ತಲುಪಿಸಲು ಕ್ರಮ: ಸಚಿವ ಜಗದೀಶ್ ಶೆಟ್ಟರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು, ಹೂವು ಬೆಳೆಗಾರರು, ಆಟೋ ಚಾಲಕರು ಸೇರಿದಂತೆ ಇತರರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸಹಾಯಧನ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಕೊವಿಡ್-19 ಹಿನ್ನೆಲೆಯಲ್ಲಿ ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ (ಮೇ 26) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಪ್ರಕರಣಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೊರ ರಾಜ್ಯದಿಂದ ಬಂದವರನ್ನು ಮಾತ್ರ ನಿಯಮಾವಳಿ ಪ್ರಕಾರ ಕ್ವಾರಂಟೈನ್ ನಲ್ಲಿ ಇರಿಸಬೇಕು ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವ ಬದಲು ಹೋಮ್ ಕ್ವಾರಂಟೈನ್ ನಲ್ಲಿ ಇರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು.

ವಿಮಾನದ ಮೂಲಕ ಬಂದವರನ್ನು ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ. 4323 ಜನರು ಮಹಾರಾಷ್ಟ್ರದಿಂದ ಬಂದಿದ್ದು, 2000 ಜನರ ಗಂಟಲು ದ್ರವ ಪರೀಕ್ಷಿಸಲಾಗಿದ್ದು, ಬಹುತೇಕ ಮಾದರಿಯ ವರದಿ ನೆಗೆಟಿವ್ ಬಂದಿರುವುದು ಸಮಾಧಾನಕರವಾಗಿದೆ ಎಂದರು.

ಅದೇ ರೀತಿ ಕೋವಿಡ್ -19 ಸೋಂಕು ಸಮುದಾಯದಲ್ಲಿ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಯಶಸ್ವಿಯಾಗಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಮಟ್ಟದಲ್ಲಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ, ಅಂಗನವಾಡಿ, ಪೊಲೀಸ್, ಕಂದಾಯ ಮತ್ತಿತರ ಇಲಾಖೆಯವರು 24 ತಾಸು ಕೆಲಸ ಮಾಡಿದ್ದು, ಅವರೆಲ್ಲರ ಶ್ರಮ ಶ್ಲಾಘನೀಯ ಎಂದರು.

ಪಾಲಿಕೆಯ ಪರಿಷ್ಕೃತ ತೆರಿಗೆ- ಚರ್ಚೆ ಬಳಿಕ ನಿರ್ಧಾರ:

ಮಹಾನಗರ ಪಾಲಿಕೆಯ ವತಿಯಿಂದ ಮಾಡಲಾಗಿರುವ ತೆರಿಗೆ ಪರಿಷ್ಕರಣೆ ಜಾರಿಗೆ ತರುವ ಬಗ್ಗೆ ಕುರಿತು ಸರ್ಕಾರದ ಮಟ್ಟದಲ್ಲಿ ಇನ್ನೂ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವರ ಜತೆ ಇನ್ನೊಂದು ಸುತ್ತು ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಶೆಟ್ಟರ್ ಹೇಳಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಇರುವುದರಿಂದ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ.
ಒಂದು ವೇಳೆ ನಗರದ ಜನರು ಈಗಾಗಲೇ ತೆರಿಗೆಯನ್ನು ಪಾವತಿಸಿದ್ದರೆ ಮುಂಬರುವ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಆಧರಿಸಿ ಮರು ಹೊಂದಾಣಿಕೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಪರಿಷ್ಕೃತ ತೆರಿಗೆಯ ಪ್ರಕಾರ ಇದುವರೆಗೆ 4.5 ಕೋಟಿ ಸಂಗ್ರಹವಾಗಿದೆ ಎಂದು ಆಯುಕ್ತರಾದ ಜಗದೀಶ್ ವಿವರಿಸಿದರು.

ಶಾಸಕ ಅಭಯ್ ಪಾಟೀಲ ಮಾತನಾಡಿ, ತೆರಿಗೆ ಹೆಚ್ಚಳದಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳವು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಸಚಿವರು ಇದೇ ವೇಳೆ ಜಿಲ್ಲೆಯಲ್ಲಿ ಕೈಗಾರಿಕೆ, ಹೋಟೆಲ್ ಕಾರ್ಯನಿರ್ವಹಣೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಪಾಲಿಕೆಯ ತೆರಿಗೆಯನ್ನು ಪರಿಷ್ಕರಿಸದೇ ಯಥಾಪ್ರಕಾರ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ಹೊರ ರಾಜ್ಯ ಮತ್ತು ಊರುಗಳ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳುತ್ತಿರುವುದರಿ‌ಂದ ಮುಂಬರುವ ದಿನಗಳಲ್ಲಿ ಕೈಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದರು.
ಕೊರೊನಾದಿಂದ ನಲುಗಿರುವ ಅಮೆರಿಕ ಮತ್ತು ಇಂಗ್ಲೆಂಡ್ ದೇಶದಲ್ಲಿ ಭಾರತೀಯ ಮೂಲದ ವೈದ್ಯರೇ ಮುಂಚೂಣಿಯಲ್ಲಿದ್ದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಹೊರಗಡೆಯಿಂದ ಬಂದವರು ಸೋಂಕಿತರು ಎನ್ನುವ ಭಾವನೆ ಜನರಲ್ಲಿ ಇರುವುದರಿಂದ ಈ ಬಗ್ಗೆ ಗ್ರಾಮಸ್ಥರ ಮನವೊಲಿಸಲಾಗುತ್ತಿದೆ ಎಂದರು.

ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ಶಾಸಕ ಅನಿಲ್ ಬೆನಕೆ ಹಾಗೂ ಶಾಸಕ ದುರ್ಯೋಧನ ಐಹೊಳೆ ಅವರು ತಮ್ಮ ಕ್ಷೇತ್ರದಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಶಾಸಕ ಮಹಾಂತೇಶ ಕೌಜಲಗಿ, ಗೋವಾದಿಂದ ಬಂದು ಹತ್ತು ದಿನಗಳಿಂದ ಕ್ವಾರಂಟೈನ್ ನಲ್ಲಿ ಇರುವ 400 ಕ್ಕೂ ಅಧಿಕ ಜನರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇದಲ್ಲದೇ ಹೂ ಬೆಳೆಗಾರರಿಗೆ ನೀಡಲಾಗುವ ಸಹಾಯಧನ ತೋಟದ ಮಾಲೀಕರಿಗೆ ಸಿಗುವ ಬದಲು ಆ ತೋಟವನ್ನು ಮಾಡುತ್ತಿರುವ ರೈತನಿಗೆ ಸಿಗುವಂತೆ ನಿಯಮಾವಳಿ ರೂಪಿಸಬೇಕಿದೆ ಎಂದರು.

75 ಜನರಿಗೆ ಸಾಂಸ್ಥಿಕ ಕ್ವಾರಂಟೈನ್:

ಜಿಲ್ಲೆಯಲ್ಲಿ ಇದುವರೆಗೆ 36 ಮಾತ್ರ ಸಕ್ರಿಯ ಪ್ರಕರಣಗಳಿವೆ. 75 ಜನರು ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದಾರೆ. ಇಂದು ಅಥಣಿ 12 ಹಾಗೂ ಹುಕ್ಕೇರಿ 1 ಪ್ರಕರಣಗಳು ದೃಢಪಟ್ಟಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.

ಜಿಲ್ಲೆಯಲ್ಲಿ ಇಂದಿನವರೆಗೆ 1009 ಪ್ರಕರಣಗಳ ಪ್ರಯೋಗಾಲಯದ ವರದಿ ನಿರೀಕ್ಷಿಸಲಾಗಿದೆ. ಹೊರಗಿನಿಂದ ಜಿಲ್ಲೆಗೆ 5952 ಜನರಲ್ಲಿ 4323 ಜನರು ಮಹಾರಾಷ್ಟದಿಂದ ಬಂದಿದವರು. ಉಳಿದವರು ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದ ಬಂದಿದ್ದಾರೆ. ಹೀಗೆ ಬಂದಿರುವ 2000 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಉಳಿದವರ ಮಾದರಿಯನ್ನು ನಾಳೆ ಸಂಜೆಯವರೆಗೆ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹೋಮ್ ಕ್ವಾರಂಟೈನ್ ಇರುವವರ ನಿರಂತರ ನಿಗಾ ವಹಿಸಲು ಆಶಾ, ಅಂಗನವಾಡಿ ಸೇರಿದಂತೆ ಅತ್ಯುತ್ತಮ ವ್ಯವಸ್ಥೆ ನಮ್ಮಲ್ಲಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ‌ ಕಾರ್ಯನಿರ್ವಹಿಸಿದ ಪಿಡಿಓ, ಆಶಾ, ಅಂಗನವಾಡಿ ಮತ್ತಿತರರಿಗೆ ಸರ್ಕಾರದಿಂದ ಬೋನಸ್ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲೆಯ ಮೂರು ಚೆಕ್ ಪೋಸ್ಟ್ ಮೂಲಕ 6651 ಪ್ರಯಾಣಿಕರ ವಾಹನಗಳು ಜಿಲ್ಲೆ ಮೂಲಕ ಹಾದು ಹೋಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button