ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ವೈರಸ್ ಹಾವಳಿ ಮಧ್ಯೆಯೇ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಭಿನ್ನಮತ ಬುಗಿಲೆದ್ದಿದ್ದು, ಭಿನ್ನಮತೀಯ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೈನಲ್ ಎಚ್ಚರಿಕೆ ನೀಡಲು ನಿರ್ಧರಿಸಿದ್ದಾರೆ.
ಮಾಜಿ ಸಚಿವರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ, ಬಸವರಾಜ ಪಾಟೀಲ ಯತ್ನಾಳ ಮೊದಲಾದವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಶಾಸಕರು ಈಗಾಗಲೆ 2 ಬಾರಿ ಸಭೆ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಮಟ್ಟಕ್ಕೆ ಭಿನ್ನಮತ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಭರವಸೆ ನೀಡಿದರೆ ಉಮೇಶ ಕತ್ತಿಯವರಿಗೆ ಮಂತ್ರಿಸ್ಥಾನ ಮತ್ತು ರಮೇಶ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವ ವಿಷಯವಾಗಿ ಭಿನ್ನಮತೀಯ ಚಟುವಟಿಕೆ ಆರಂಭವಾಗಿದೆ. ಮುರುಗೇಶ ನಿರಾಣಿಯವರಿಗೆ ಸಹ ಮಂತ್ರಿಸ್ಥಾನ ನೀಡಲು ಯಡಿಯೂರಪ್ಪ ನಿರಾಕರಿಸುತ್ತಿರುವುದು ಸಹ ಇದರೊಂದಿಗೆ ಸೇರಿಕೊಂಡಿದೆ.
ಸಚಿವಸಂಪುಟ ರಚನೆ ವೇಳೆ ಉಮೇಶ ಕತ್ತಿಗೆ ಸ್ಥಾನ ನೀಡಿಲ್ಲ. ಆದಷ್ಟು ಶೀಘ್ರವಾಗಿ ಕೊಡಲಾಗುವುದು, ಸ್ವಲ್ಪ ದಿನ ಸುಮ್ಮನಿರಿ ಎಂದು ಮಕ್ಕಳನ್ನು ಸುಮ್ಮನಿರಿಸುವಂತೆ ಸುಮ್ಮನಿರಿಸಿದ್ದಾರೆ. ನಂತರ ರಮೇಶ ಕತ್ತಿಗೆ ಲೋಕಸಭಾ ಟಿಕೆಟ್ ತಪ್ಪಿಸಿ ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ಹೇಳಿ ಸುಮ್ಮನಿರಿಸಿದ್ದಾರೆ. ಪ್ರತಿ ಬಾರಿ ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ನಡೆಯುತ್ತಿದೆ.
ಈ ಬಾರಿ ರಮೇಶ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡದಿದ್ದರೆ ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಭಿನ್ನ ಮತೀಯರ ಸಭೆಯಲ್ಲಿ ಕತ್ತಿ ಸಹೋದರರು ಎಚ್ಚರಿಕೆ ನೀಡಿದ್ದಾರೆ. ಇದೇ ಸಭೆಯಲ್ಲಿ ಮಂತ್ರಿಸ್ಥಾನ ಆಕಾಂಕ್ಷಿಗಳಾದ ಹಲವರು ಭಾಗವಹಿಸಿ, ಯಡಿಯೂರಪ್ಪ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕತ್ತಿ ಮನೆತನ ದೊಡ್ಡ ಇತಿಹಾಸ ಹೊಂದಿರುವ ಮನೆತನ. ಈ ಮನೆತನಕ್ಕೆ ಆಗುತ್ತಿರುವ ಅನ್ಯಾಯವನ್ನು ಜನ ತಾಳ್ಮೆ, ಸಹನೆಯಿಂದ ನೋಡುತ್ತಿದ್ದಾರೆ ಎಂದು ರಮೇಶ ಕತ್ತಿ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ತಾವೇ ನೀಡಿದ ಭರವಸೆಯನ್ನು ಈಡೇರಿಸುವಂತೆ ಅವರಿಗೆ ನೆನಪು ಮಾಡಿಕೊಟ್ಟಿದ್ದೇವೆ. ನನಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಪಕ್ಷದ ಎಲ್ಲ ನಾಯಕರಿಗೂ ವಿನಂತಿಸಿದ್ದೇವೆ. ಅವರ ಮಾತನ್ನು ಅವರಿಗೆ ನೆನಪು ಮಾಡುಕೊಡುವ ಕೆಲಸ ಮಾಡಿದ್ದೇವೆ ಎಂದು ರಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.
ಭಿನ್ನಮತೀಯ ಸಭೆ ನಡೆಸಿಲ್ಲ. ಪ್ರವಾಹ, ಬರ ಮುಂತಾದ ವಿಷಯಗಳನ್ನು ಚರ್ಚಿಸಲು ಸಭೆ ನಡೆಸಿದ್ದೇವೆ. ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವವಿದೆ ಎಂದು ಅವರು ಹೇಳಿದ್ದಾರೆ.
ನನಗೆ ಲೋಕಸಭೆಯಲ್ಲಿ ಏಕೆ ಟಿಕೆಟ್ ತಪ್ಪಿತ್ತು ಎನ್ನುವುದು ಈವರೆಗೂ ನನಗೆ ಗೊತ್ತಾಗಿಲ್ಲ. ಇದಕ್ಕೆ ಕಾರಣವನ್ನೇ ನೀಡಿಲ್ಲ. ಹೊಡೆಯುವಾಗ ಏಕೆ ಹೊಡೆಯುತ್ತಿದ್ದೀರಿ ಎಂದು ಹೇಳಿ ಹೊಡೆಯಿರಿ. ಸುಮ್ಮನೇ ಹೊಡೆಯಬೇಡಿ ಎಂದು ರಮೇಶ ಕತ್ತಿ ಪರೋಕ್ಷವಾಗಿ ಪಕ್ಷದ ನಿಲುವಿನ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನಾನು ಕೇವಲ 3 ಸಾವಿರ ಮತದಿಂದ 2014ರ ಚುನಾವಣೆಯಲ್ಲಿ ಸೋತಿದ್ದೆ. ಆದರೆ ನನಗೆ ಏಕೆ ಟಿಕೆಟ್ ತಪ್ಪಿತು ಎನ್ನುವುದನ್ನು ಹೇಳಿಲ್ಲ. ನಂತರ ಯಡಿಯೂರಪ್ಪ ರಾಜ್ಯಸಭೆಗೆ ಆರಿಸಿ ಕಳಿಸುವುದಾಗಿ ಹೇಳಿದ್ದರು. ಪ್ರಭಾಕರ ಕೋರೆಗೆ ಟಿಕೆಟ್ ಕೊಡಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ನನಗೆ ನೀವು ಕೊಟ್ಟ ಮಾತಿನಂತೆ ಟಿಕೆಟ್ ಕೊಡಿ ಎಂದಷ್ಟೇ ಕೇಳುತ್ತಿದ್ದೇನೆ ಎಂದು ರಮೇಶ ಕತ್ತಿ ಹೇಳಿದ್ದಾರೆ.
ನಾವು ಒಂದಿಷ್ಟು ಜನ ಸೇರಿ ಊಟ ಮಾಡಿದ್ದು ನಿಜ. ಅಲ್ಲಿ ಅಭಿವೃದ್ಧಿ ವಿಷಯ ಚರ್ಚೆಯಾಗಿದೆ. ಈ ಬಗ್ಗೆ ಯಡಿಯೂರಪ್ಪ ಫೋನ್ ಮಾಡಿ ಉಮೇಶ ಕತ್ತಿ ಜೊತೆ ಮಾತನಾಡಿದ್ದಾರೆ. 15 -20 ಜನರನ್ನು ಕರೆದು ಊಟ ಹಾಕಿದ್ದೀಯಂತೆ, ನನ್ನನ್ಯಾಕೆ ಕರೆದಿಲ್ಲ ಎಂದು ಯಡಿಯೂರಪ್ಪ ಉಮೇಶ ಕತ್ತಿಗೆ ಫೋನ್ ಮಾಡಿ ಕೇಳಿದ್ದಾರೆ. ರೊಟ್ಟಿ, ಎಣಗಾಯಿ ಪಲ್ಲೆ ಮಾಡಿದ್ದೆ. ಮೊದಲೇ ಹೇಳಿದ್ದರೆ ನಿಮ್ಮನ್ನೂ ಕರೀತಿದ್ದೆ ಎಂದು ಉತ್ತರಿಸಿದ್ದಾರೆ ಎಂದು ರಮೇಶ ಕತ್ತಿ ತಿಳಿಸಿದ್ದಾರೆ.
ಒಟ್ಟಾರೆ, ರಾಜ್ಯ ಬಿಜೆಪಿಯಲ್ಲಿ ದೊಡ್ಡಮಟ್ಟದ ಭಿನ್ನಮತ ಸ್ಫೋಟಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಯಾವರೀತಿ ಪರಿಣಾಮ ಉಂಟುಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದೇ ವೇಳೆ, ಕಾಂಗ್ರೆಸ್ ನೇತೃತ್ವ ಡಿ.ಕೆ.ಶಿವಕುಮಾರ ಕೈ ಗೆ ಬಂದಿರುವುದರಿಂದ ರಾಜ್ಯ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವುದು ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಲಿದೆ.
ಕತ್ತಿ ಮನೆತನ ದೊಡ್ಡ ಇತಿಹಾಸ ಹೊಂದಿರುವ ಮನೆತನ. ಈ ಮನೆತನಕ್ಕೆ ಆಗುತ್ತಿರುವ ಅನ್ಯಾಯವನ್ನು ಜನ ತಾಳ್ಮೆ, ಸಹನೆಯಿಂದ ನೋಡುತ್ತಿದ್ದಾರೆ
-ರಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ