Latest

ಜಿಂದಾಲ್ ಕಂಪನಿ ಉದ್ಯೋಗಿಗಳಲ್ಲಿ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಜಿಂದಾಲ್ ಉಕ್ಕು ಕಂಪನಿಯ ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ.

ಇಂದು ಒಂದೇ ದಿನ ಜಿಂದಾಲ್ ನಲ್ಲಿ 46 ಪ್ರಕರಣಗಳು ದಾಖಲಾಗುವ ಮೂಲಕ ಜಿಂದಾಲ್ ನೌಕರರಲ್ಲಿ ಈವರೆಗೂ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಜಿಲ್ಲೆಯ ತೊರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 33,000ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಆರಂಭ ಆದಾಗಿನಿಂದಲೂ ಜಿಂದಾಲ್ ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಸ್ಥಳೀಯ ಪ್ರತಿನಿಧಿಗಳು ಆಗ್ರಹ ಮಾಡಿದ್ದರು. ಆದರೆ ಇಷ್ಟು ದಿನ ಜಿಂದಾಲ್ ನಲ್ಲಿ ಒಂದೇ ಒಂದು ಪ್ರಕರಣ ಪತ್ತೆ ಆಗಿರಲಿಲ್ಲ. ಕಳೆದ ಒಂದು ವಾರದಿಂದ ಜಿಂದಾಲ್ ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ.

ಕಳೆದ ಎರಡು ದಿನಗಳಿಂದ ಜಿಂದಾಲ್ ನಲ್ಲಿ ಸೋಂಕಿತರ ಪ್ರಕರಣ ಹೆಚ್ಚಿದ್ದು, ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ಅವರು ಜಿಂದಾಲ್ ಓಪಿಜಿ ಸೆಂಟರ್ ಗೆ ಅನಿರ್ಧಿಷ್ಟ ಕಾಲ ರಜೆ ನೀಡುವಂತೆ ಆದೇಶ ಮಾಡಿದ್ದಾರೆ. ಅಲ್ಲದೇ ಎಲ್ಲ ಸಿಬ್ಬಂದಿ ಹೋಂ ಕ್ವಾರೆಂಟೈನ್ ಆಗಲು ಸೂಚನೆ ನೀಡಲಾಗಿದೆ. ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳ ಆಗುವ ಸಾಧ್ಯತೆಯಿದ್ದು, ಜಿಲ್ಲೆಯಾದ್ಯಂತ ಆತಂಕ ಹೆಚ್ಚಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button