Latest

ಚೀನಾ ವಸ್ತುಗಳ ಬಹಿಷ್ಕಾರ ಕಷ್ಟವಾದರೂ ಅಸಾಧ್ಯವೇನಲ್ಲ

ಗಿರೀಶ್ ಭಟ್
ಭಾರತದ ಅಮಾಯಕ ಸೈನಿಕರನ್ನು ಹತ್ಯೆಗೈದ ಕ್ರೂರಿ ಚೀನಾಕ್ಕೆ ಪಾಠ ಕಲಿಸಬೇಕೆಂದರೆ ಬಾಯ್ಕಾಟ್ ಅಭಿಯಾನ ಇನ್ನೂ ಚುರುಕಿನಿಂದ ಮುಂದುವರಿಯಬೇಕು. ಮೊದಲು ನನ್ನ ಮೊಬೈಲ್‌ನಲ್ಲಿದ್ದ ಚೈನಾ ಆಪ್ ಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ಪ್ರಾರಂಭಿಸಿದ್ದೇನೆ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು. ಅಲ್ಲದೆ ಚೈನಾದ ವಸ್ತುಗಳನ್ನೂ ನಾನು ಇನ್ನು ಖರೀದಿಸುವುದಿಲ್ಲ ಎಂದು ಪಣ ತೊಡಬೇಕು.

ಬಾಲಿವುಡ್‌ನ ಘಟಾನುಘಟಿ ನಟ-ನಟಿಯರು ಟಿವಿ ಜಾಹೀರಾತಿನ ಮೂಲಕ ಭಾರತದಲ್ಲಿ ಚೀನಾದ ವಸ್ತುಗಳ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಮೊದಲು ಬಾಯ್ಕಾಟ್ ಚೀನಾ ಅಭಿಯಾನದಲ್ಲಿ ಕೈ ಜೋಡಿಸಬೇಕು. ಸದಾ ಗಡಿಯಲ್ಲಿ ತಂಟೆ ಮಾಡಿಕೊಂಡು, ಸೈನಿಕರನ್ನು ಬೆದರಿಸುತ್ತಿರುವ ಚೀನಾಕ್ಕೆ ಆರ್ಥಿಕವಾಗಿ ತೀವ್ರ ಪೆಟ್ಟು ಬೀಳಬೇಕೆಂದರೆ ಅದರ ಆರ್ಥಿಕ ಶಕ್ತಿಗೆ ಪ್ರಮುಖ ಕಾರಣವಾದ ಭಾರತ ಸಮಸ್ತ ದೇಶವೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಚೀನಾಕ್ಕೆ ನಾವು ಯಾವ ಯಾವ ಉತ್ಪನ್ನಗಳಿಗೆ ಅವಲಂಬಿಸಿದ್ದೇವೆಯೋ ಅವು ಭಾರತದಲ್ಲಿಯೇ ತಯಾರಾಗುವಂತೆ ಸರಕಾರ ಭಾರತದಲ್ಲಿನ ಜನರಿಗೆ ಪ್ರೋತ್ಸಾಹಿಸಬೇಕು.

೫೦೦ ಕ್ಕೂ ಹೆಚ್ಚು ಉತ್ಪನ್ನಗಳು:

ಭಾರತೀಯರು ಬಹಿಷ್ಕರಿಸಬೇಕಾದ ೫೦೦ ಕ್ಕೂ ಹೆಚ್ಚು ’ಮೇಡ್ ಇನ್ ಚೀನಾ’ ಉತ್ಪನ್ನಗಳ ಪಟ್ಟಿಯನ್ನು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ((CAIT)) ಬಿಡುಗಡೆ ಮಾಡಿದೆ. ಈ ಸಂಸ್ಥೆಯು ಮಾಡಿರುವ ಪಟ್ಟಿಯಲ್ಲಿ ಆಟಿಕೆಗಳು, ಬಟ್ಟೆಗಳು, ಜವಳಿ, ಉಡುಪು, ದೈನಂದಿನ ವಸ್ತುಗಳು, ಅಡಿಗೆ ವಸ್ತುಗಳು, ಪೀಠೋಪಕರಣಗಳು, ಯಂತ್ರಾಂಶ, ಪಾದರಕ್ಷೆಗಳು, ಕೈಚೀಲಗಳು, ಸಾಮಾನುಗಳು, ಎಲೆಕ್ಟ್ರಾನಿಕ್ಸ್, ಸೌಂದರ್ಯವರ್ಧಕಗಳು, ಉಡುಗೊರೆ ವಸ್ತುಗಳು, ಎಲೆಕ್ಟ್ರಾನಿಕ್ಸ್, ಕೈಗಡಿಯಾರಗಳು, ರತ್ನಗಳು, ಆಭರಣಗಳು, ಲೇಖನ ಸಾಮಗ್ರಿಗಳು, ಕಾಗದ ಮತ್ತು ಗೃಹೋಪಯೋಗಿ ವಸ್ತುಗಳು ಸೇರಿವೆ.

ಗೂಗಲ್‌ನಲ್ಲಿ ತೀವ್ರವಾದ ಹುಡುಕಾಟ:

ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಆದರೆ ಭಾರತ-ಚೀನಾ ದೇಶಗಳ ಗಾಲ್ವನ್ ಗಡಿಯಲ್ಲಿ ಜೂನ್ ೧೫ ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದೆ. ಇದರಲ್ಲಿ ಭಾರತದ ೨೦ ಸೈನಿಕರು ಪ್ರಾಣವನ್ನೂ ತೆತ್ತಾಗಿದೆ. ಈ ಬೆಳವಣಿಗೆಯ ನಂತರ ಭಾರತದಲ್ಲಿ ಮೇಡ್ ಇನ್ ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸುವ ಅಭಿಯಾನ ನಡೆಯುತ್ತಿದೆ. ಆದ್ದರಿಂದ ಭಾರತೀಯರು ಚೀನಾ ಮೂಲದ ಉತ್ಪನ್ನಗಳು ಯಾವುವು ಎಂಬ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ.

ಗೂಗಲ್‌ನಲ್ಲಿ ಚೀನಾ ಉತ್ಪನ್ನಗಳು, ಚೀನಾ ಆಟಿಕೆಗಳು ಯಾವುವು ಎಂಬ ಹುಡುಕಾಟ ಜೋರಾಗಿ ನಡೆದಿದೆ. ಭಾರತದಲ್ಲಿ ಬಳಸುವ ಚೀನಾ ಉತ್ಪನ್ನಗಳಿಗೆ ಪರ್ಯಾಯ ಉತ್ಪನ್ನಗಳು ಯಾವುವು. ಚೀನಾ ಆಪ್‌ಗಳಿಗೆ ಪರ್ಯಾಯ ಆಪ್‌ಗಳು ಯಾವುವು ಎಂಬ ಬಗ್ಗೆಯೂ ಭಾರತೀಯರು ಗೂಗಲ್‌ನಲ್ಲಿ ಹುಟುಕಾಟ ನಡೆಸಿದ್ದಾರೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಇಂದಿನದಲ್ಲ. ಆದರೆ ಕೊರೊನಾ ನಂತರದ ಇತ್ತೀಚಿನ ದಿನಗಳಲ್ಲಿ ಬಾಯ್ಕಟ್ ಚೀನಾ ಅಭಿಯಾನ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಚೀನಾ ಆಪ್ ಸುರಕ್ಷಿತವಲ್ಲ:

ಪ್ರಧಾನಿ ಮೋದಿ ಅವರು ’ಆತ್ಮ ನಿರ್ಭರ್ ಭಾರತ್’ ಗೆ ಕರೆ ಕೊಟ್ಟ ನಂತರ ದೇಶದ ಜನತೆ ಸ್ವದೇಶಿ ಮಂತ್ರ ಜಪಿಸಲಾರಂಭಿಸಿದ್ದಾರೆ. ಭಾರತೀಯರಲ್ಲಿ ಮತ್ತೊಮ್ಮೆ ಚೀನಾ ಮೇಲೆ ಆಕ್ರೋಶ ವ್ಯಕ್ತವಾಗಿದೆ. ೨೦೧೭ರಲ್ಲಿ ಚೀನಾ ಜೊತೆ ಡೋಕ್ಲೋಮ್‌ನಲ್ಲಿ ನಡೆದ ಸಂಘರ್ಷದ ನಂತರವೂ ಇದೇ ರೀತಿ ಚೀನಾ ವಿರುದ್ಧ ಆರ್ಥಿಕ ನಿರ್ಬಂಧದ ಕೂಗೆದ್ದಿತ್ತು. ಭಾರತೀಯ ಗುಪ್ತಚರ ಇಲಾಖೆಯೂ ಭಾರತೀಯರ ಸುರಕ್ಷತೆಗಾಗಿ ಚೀನಾಕ್ಕೆ ಸಂಬಂಧಿಸಿದ ೫೨ ಆಪ್ ಬಳಸದಿರಲು ಕೋರಿದೆ. ಟ

ಮೊದ ಮೊದಲು ಭಾರತಕ್ಕೆ ಆರ್ಥಿಕ ಹೊಡೆತ:

ಆದರೆ ಏಕಾಏಕಿ ಚೀನಾದೊಡನೆ ವ್ಯವಹಾರ ಬಂದ್ ಮಾಡಿದರೆ ಇದರಿಂದ ಚೀನಾಕ್ಕಿಂತ ಭಾರತಕ್ಕೆ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಹೀಗೆ ಮಾಡುವುದರಿಂದ ಚೀನಾಕ್ಕಿಂತ ಹೆಚ್ಚಾಗಿ ಭಾರತೀಯ ಹಣಕಾಸು ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ಭಾರತದ ಒಟ್ಟಾರೆ ಆರ್ಥಿಕ ವ್ಯವಹಾರಗಳಲ್ಲಿ ಚೀನಾದಿಂದ ಆಮದಾಗುವ ಸರಕುಗಳಿಂದ ಬರುವ ಪಾಲು ಹೇರಳವಾಗಿದೆ. ಇದರ ಬೆನ್ನಲ್ಲೆ ಸುಮಾರು ೩೭೧ ಚೀನಿ ವಸ್ತುಗಳ ಮೇಲೆ ನಿರ್ಬಂಧ ಹೇರಲು ವಾಣಿಜ್ಯ ಇಲಾಖೆ ಶಿಫಾರಸು ಮಾಡಿದೆ. ೫೦೦ ಕ್ಕೂ ಅಧಿಕ ಚೀನಿ ಉತ್ಪನ್ನ ನಿಷಧಕ್ಕೆ ವಾಣಿಜ್ಯ ಒಕ್ಕೂಟಗಳು ಕರೆ ನೀಡಿವೆ.

೧೨೭ ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು :

ಪ್ಲಾಸ್ಟಿಕ್ ಉತ್ಪನ್ನ, ಆಟಿಕೆ, ಕ್ರೀಡಾ ಉಪಕರಣ, ಪೀಠೋಪಕರಣಗಳು ಸೇರಿವೆ. ಸರಿ ಸುಮಾರು ೧೨೭ ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಲಕ್ಷಾಂತರ ಮಂದಿ ಉದ್ಯೋಗ, ದೈನಂದಿನ ಬದುಕು ಒಮ್ಮೆಗೆ ನೆಲಕಚ್ಚಲಿದೆ. ಅಷ್ಟೇ ಏಕೆ ಕೊವಿಡ್ ೧೯ಗೆ ಸೂಕ್ತ ಔಷಧಿ ಎನಿಸಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಅಧಿಕ ಪ್ರಮಾಣದಲ್ಲಿ ಭಾರತದಲ್ಲೇ ತಯಾರಿಸಿದರೂ ಇದಕ್ಕೆ ಬೇಕಾದ ಕಚ್ಚಾವಸ್ತುವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬಟ್ಟೆ ಬರೆ, ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಜ್, ಫ್ಯಾನ್, ವಾಷಿಂಗ್ ಮಷಿನ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಎಲ್ಲಕ್ಕೂ ಚೀನಾದ ಮೇಲೆ ಭಾರತೀಯ ಕಂಪನಿಗಳು ಅವಲಂಬಿತವಾಗಿದೆ. ಕೆಲವು ಚೀನಾ ಕಂಪನಿಗಳು ವಿದೇಶಿ ನೇರ ಬಂಡವಾಳ ಹೂಡಿಕೆ ಲಾಭದಿಂದ ಭಾರತದಲ್ಲೇ ಭದ್ರವಾಗಿ ನೆಲೆಯೂರಿದೆ.

ಆಮದು ೨೨.೨೦ ಬಿಲಿಯನ್ ಡಾಲರ್ :

ಚೀನಾಕ್ಕೆ ಭಾರತ ರಫ್ತು ಮಾಡುವ ಪ್ರಮಾಣದ ೭ ಪಟ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜನವರಿ ೨೦೨೦ರಲ್ಲಿ ೪೨೯.೫೫ ಬಿಲಿಯನ್ ಮೌಲ್ಯದ ಸರಕು ಆಮದಾಗಿತ್ತು. ಫೆಬ್ರವರಿಯಲ್ಲಿ ೩೧೭.೬೪ ಬಿಲಿಯನ್‌ಗೆ ಇಳಿಕೆಯಾಯಿತು. ೨೦೧೮-೧೯ರಲ್ಲಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ೧೬.೭ ಬಿಲಿಯನ್ ಡಾಲರ್ ನಷ್ಟಿತ್ತು. ಆದರೆ, ಆಮದು ಮೌಲ್ಯ ೭೦.೩ ಬಿಲಿಯನ್ ಡಾಲರ್ ನಷ್ಟಿತ್ತು. ೨೦೨೦ರಲ್ಲಿ ಭಾರತದ ಒಟ್ಟಾರೆ ರಫ್ತು ಪ್ರಮಾಣ ಮೇ ತಿಂಗಳಲ್ಲಿ ೧೯.೦೫ ಬಿಲಿಯನ್ ಡಾಲರ್ ನಷ್ಟಿದೆ. ಆಮದು ಪ್ರಮಾಣ ೨೨.೨೦ ಬಿಲಿಯನ್ ಡಾಲರ್ ನಷ್ಟಿದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ ೫೦ ಬಿಲಿಯನ್ ಡಾಲರ್ ನಷ್ಟಿರುತ್ತದೆ. ಹಾಗಾಗಿ, ಚೀನಿ ಸರಕುಗಳ ನಿಷೇಧವು ಭಾರತಕ್ಕೆ ಹೊಡೆತವೇ ಹೆಚ್ಚು. ಚೀನಾದ ಒಟ್ಟು ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲು ಶೇ ೨ರಷ್ಟು ಮಾತ್ರ ಅಂದರೆ, ಭಾರತದ ರಫ್ತು ಪಾಲು ೨%. ಹೀಗಾಗಿ ಚೀನಾಕ್ಕೆ ಯಾವುದೇ ರೀತಿ ನಿರ್ಬಂಧ, ನಿಷೇಧದ ಬಿಸಿ ತಟ್ಟಲಾರದು.

ಭಾರತದಲ್ಲಿ ಚೀನಾ ಮೊಬೈಲ್‌ಗಳ ಪ್ರಭಾವ :

ಮೇ ತಿಂಗಳ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ ೭೩ರಷ್ಟು ಚೀನಾ ಮೂಲದ ಶಿಯೋಮಿ, ಒಪ್ಪೋ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೋನ್‌ಗಳು ಮಾರಾಟವಾಗಿವೆ. ಮಾರುಕಟ್ಟೆಯಲ್ಲಿ ಮಿಕ್ಕ ಪಾಲನ್ನು ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್, ಫಿನ್ಲೆಂಡ್‌ನ ನೋಕಿಯಾ ಹಂಚಿಕೊಂಡಿವೆ. ಭಾರತದ ಪ್ರಮುಖ ೩೦ ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ ೧೮ರಲ್ಲಿ ಚೀನಾ ಹೂಡಿಕೆ ಹೊಂದಿದೆ. ಬೈಜೂಸ್, ಜೊಮ್ಯಾಟೋ, ಡ್ರೀಮ್ ೧೧, ಹೈಕ್ ಮೆಸೆಂಜರ್, ಸ್ವಿಗ್ಗಿ, ಓಲಾ ಕ್ಯಾಬ್ಸ್, ಫ್ಲಿಪ್ ಕಾರ್ಟ್, ಪೇಟಿಎಂ, ಬಿಗ್ ಬ್ಯಾಸ್ಕೆಟ್, ಸ್ನಾಪ್ ಡೀಲ್ ಸಂಸ್ಥೆಗಳಲ್ಲಿ ಚೀನಾದ ಆಲಿಬಾಬಾ (ಸುಮಾರು ೫ ಬಿಲಿಯನ್ ಡಾಲರ್), ಟೆನ್ ಸೆಂಟ್ ಕಂಪನಿ(೩ ಬಿಲಿಯನ್ ಡಾಲರ್) ಹೂಡಿಕೆಯಿದೆ.

ಶೇ. ೯೦ ರಷ್ಟು ಹೂಡಿಕೆ:

ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ ೩೦ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ ೯೦ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ ೫೦ರಷ್ಟು ಚೀನಾದ ಪಾಲು ಇದೆ. ಆಮದು ಕಡಿಮೆ ಮಾಡಿಕೊಂಡು, ರಫ್ತು ಹೆಚ್ಚಾಗುವಂತೆ ನೋಡಿಕೊಳ್ಳುವುದು. ಅಲ್ಲದೆ ವ್ಯಾಪಾರ ವಹಿವಾಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ಇದರ ಜೊತೆಗೆ ಯಾವುದರ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂಬುದನ್ನು ಗುರುತಿಸುವುದು. ಭಾರತದಲ್ಲಿ ಇನ್ನಷ್ಟು ಮಾನವ ಸಂಪನ್ಮೂಲ, ಅನುದಾನ ಸಿಕ್ಕರೆ, ಉತ್ತಮ ಗುಣಮಟ್ಟದ ಸ್ವದೇಶಿ ಉತ್ಪನ್ನಗಳು ಹೊರ ಬರಲು ಸಾಧ್ಯ. ದೇಶಿ ಕಂಪನಿಗಳಿಗೆ ನೀಡುವ ಸಾಲ, ಬಡ್ಡಿದರದಲ್ಲಿ ವಿನಾಯಿತಿ, ರಿಯಾಯಿತಿ ಅಗತ್ಯ. ಇದು ಚೀನಾ ಅನುಸರಿಸಿಕೊಂಡು ಬಂದಿರುವ ಮಾರ್ಗವಾಗಿದೆ.
ಆರ್ಥಿಕ ಪ್ಯಾಕೇಜ್ ದೇಶಿ ಕಂಪನಿಗಳಿಗೆ ಬೇಕಾದ ಆರ್ಥಿಕ ಪ್ಯಾಕೇಜ್ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈಗ ಭಾರತ ಸರ್ಕಾರದಿಂದ ಮೂಲ ಸೌಕರ್ಯ ಒದಗಿಸುವುದು, ಮಾರುಕಟ್ಟೆಯಲ್ಲಿ ಚೀನಿ ಕಂಪನಿ ವಿರುದ್ಧ ಸ್ಪರ್ಧಿಸಲು ಬಲ ತುಂಬುವ ಕೆಲಸ ಆಗಬೇಕಿದೆ. ವಿದೇಶಿ ನೇರ ಬಂಡವಾಳ ಕ್ಷೇತ್ರದಲ್ಲಿ ಇನ್ನಷ್ಟು ಉದಾರೀಕರಣ ನೀತಿ ಅವಶ್ಯಕ. ಪ್ರತಿಯೊಬ್ಬರೂ ’ಆತ್ಮ ನಿರ್ಭರ್ ಭಾರತ್’ ಸಂಕಲ್ಪ ತೊಟ್ಟು ’ಮೊದಲು ನಾನು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು. ಆಗ ಮಾತ್ರ ಚೀನಾ ವಸ್ತುಗಳ ಬಹಿಷ್ಕಾರ ಸಂಪೂರ್ಣ ದೇಶದಿಂದ ಸಾಧ್ಯ’ ಎಂಬ ಮನಸ್ಥಿತಿ ಹೊಂದಿದಲ್ಲಿ ’ಬಾಯ್ಕಾಟ್ ಚೀನಾ ಅಭಿಯಾನ’ ಯಶಸ್ವಿಯಾಗಬಹುದು. ಆಗ ಚೀನಾಕ್ಕೆ ಭಾರತ ಆರ್ಥಿಕವಾಗಿ ಬಲವಾದ ಪೆಟ್ಟು ಕೊಡಲು ಸಾಧ್ಯ. ಇಲ್ಲದಿದ್ದಲ್ಲಿ ಸ್ವಲ್ಪ ದಿನ ಎಲ್ಲರೂ ಜೋರಾಗಿ ’ಬಾಯ್ಕಾಟ್ ಚೀನಾ’ ಎಂದು ಕಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಪೋಸ್ಟ್ ಹಾಕಿ ಮರೆತುಬಿಟ್ಟರೆ ಬಾಯ್ಕಾಟ್ ಚೀನಾ ಕನಸಾಗಿಯೇ ಉಳಿಯುತ್ತದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button