Kannada News

ಮಾದಕ ದ್ರವ್ಯದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪಿಎಸ್ಐ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ನಶಾ ಪದಾರ್ಥಗಳ ಸೇವನೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಏರುತ್ತಿದೆ, ಕಾರಣ ಸದೃಢ ಸಮಾಜ ನಿರ್ಮಾಣಕ್ಕಾಗಿ ನಶಾ ಪದಾರ್ಥಗಳನ್ನು ತೊರೆಯುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪಿಎಸೈ ಕುಮಾರ ಹಿತ್ತಲಮನಿ ಹೇಳಿದರು.
ಪಟ್ಟಣದ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವರ್ತುಳದ ಮುಂಭಾಗದಲ್ಲಿ ಕಿತ್ತೂರು ಪೊಲೀಸ್ ಠಾಣೆ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಈಗಿನ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಚಟಗಳ ದಾಸರಾಗಿದ್ದಾರೆ. ಇದರ ಪರಿಣಾಮ ಸಮಾಜದ ಮೇಲಾಗುತ್ತಿದ್ದು ಆರೋಗ್ಯಯುತ ಸಮಾಜ ನಿರ್ಮಿಸಲು ತೊಂದರೆಯುಂಟಾಗುತ್ತದೆ ಎಂದರು.
ಗಾಂಜಾ, ಚರಸ್ ಹಾಗೂ ಡ್ರಗ್ಸ  ಇತ್ಯಾದಿ ನಶಾ ಪದಾರ್ಥಗಳನ್ನು ಸರ್ಕಾರ ನಿಷೇಧಿಸಿದೆ. ಆದರೂ ಸಹ ಕೆಲ ಕಿಡಗೇಡಿಗಳು ಇಂತಹ ಪದಾರ್ಥಗಳನ್ನು ಕದ್ದುಮುಚ್ಚಿ ಮಾರುವುದರ ಜೊತೆಗೆ ಯುವಕರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ,.ಅಂತವರು ಕಂಡು ಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಹೇಳಿದ ಅವರು, ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಿದಲ್ಲಿ ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯಬಹುದಾಗಿದ್ದು ಯಾವುದೇ ಸಂದರ್ಭದಲ್ಲಾದರೂ ಸಾರ್ವಜನಿಕರ ಸಹಾಯಕ್ಕೆ ಪೊಲೀಸ್ ಇಲಾಖೆ ಸನ್ನದ್ದವಾಗಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button