Latest

ಬೆಡ್, ವೆಂಟಿಲೇಟರ್, ಖರ್ಚಿನ ಬಗ್ಗೆ ಸರ್ಕಾರ ಜನರಿಗೆ ಮಾಹಿತಿ ನೀಡಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್‍ಡೌನ್‍ಗಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಕಡಿಮೆ ಸೋಂಕಿತ್ತು. ಕಡಿಮೆ ಸೋಂಕು ಇದ್ದಾಗ ನಮಗೆ ಸಿದ್ಧತೆ ಮಾಡಿಕೊಳ್ಳಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಮಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ತಪ್ಪು ನಿರ್ಧಾರಗಳಿಂದ ಸೋಂಕು ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಫಂಡ್‍ಗೆ ಬಂದ 290 ಕೋಟಿಯಲ್ಲಿ ಒಂದು ರೂಪಾಯಿಯನ್ನಾದರೂ ಖರ್ಚು ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಸಚಿವರುಗಳ ನಡುವೆಯೇ ಸಮನ್ವಯತೆ ಇಲ್ಲ. ಶ್ರೀರಾಮುಲು ಮತ್ತು ಸುಧಾಕರ್ ಇಬ್ಬರಿಗೂ ಸೋಂಕು ನಿರ್ವಹಣೆಯ ಜವಾಬ್ದಾರಿ ಕೊಟ್ಟರು. ಈಗ ಸುಧಾಕರ್ ಬಿಟ್ಟು ಆರ್ ಅಶೋಕ್‍ಗೆ ಕೊಟ್ಟಿದ್ದಾರಂತೆ. ಸುಧಾಕರ್ ನಿಂದ ಕಿತ್ತು ಅಶೋಕ್‍ಗೆ ಏಕೆ ಕೊಟ್ಟರು? ಬೇಸಿಕಲಿ ಸುಧಾಕರ್ ಡಾಕ್ಟರ್, ಪ್ರಾಕ್ಟೀಸ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಡಿಕಲ್ ಬೇಸಿಕ್ ಗೊತ್ತಿರುತ್ತೆ ಎಂದು ಸುಧಾಕರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕನ್ನು ತಡೆಯಲು ಸರಿಯಾದ ರೀತಿ ಸಿದ್ಧತೆ ಮಾಡಿಕೊಂಡಿಲ್ಲ. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಅಂತಾರೆ, ನಮ್ಮ ದೇಶದ ಪ್ರಾಕೃತಿಕ ಗುಣ ಲಕ್ಷಣಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆ ಕಾರಣದಿಂದ ಸಾವಿನ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ಬೇರೆ ದೇಶಗಳಿಂತ ಗರಿಷ್ಠ ಶೇ.3 ಮಾತ್ರ ಸಾವಿನ ಸಂಖ್ಯೆ ಇದೆ. ರಾಜ್ಯದಲ್ಲೂ ಅದೇ ಪ್ರಮಾಣ ಅಂದರೆ ಶೇ.2ರಿಂದ ಶೇ.3ರಷ್ಟು ಸಾವಿನ ಸಂಖ್ಯೆ ಇದೆ ಎಂದು ಹೇಳಿದರು.

ಆರೋಗ್ಯ ಸಚಿವರ ಜಿಲ್ಲೆ ಬಳ್ಳಾರಿಯಲ್ಲಿ ನಡೆದ ಘಟನೆ ಅಮಾನುಷವಾಗಿದೆ. ಸೋಂಕಿತರ ಮೃತದೇಹವನ್ನು ತಿಪ್ಪೆಗೆ ಎಸೆದಂತೆ ಎಸೆಯುತ್ತಿದ್ದಾರೆ. ಹೀಗೆ ಮಾಡಿದವರನ್ನು ಸಸ್ಪೆಂಡ್ ಮಾಡಿದ್ದೇವೆ ಅನ್ನೋದು ಪರಿಹಾರಾನಾ? ಇಷ್ಟು ಸಾವಿನ ನಂತರವೂ ಶವ ಸಂಸ್ಕಾರ ಹೇಗೆ ಮಾಡುವುದು ಎಂದು ಸರ್ಕಾರ ತಿಳಿದುಕೊಂಡಿಲ್ಲ ಎಂದು ಗುಡುಗಿದರು.

ಮಂತ್ರಿಗಳಲ್ಲೇ ಸಮನ್ವಯತೆ ಇಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಎಷ್ಟು ಬೆಡ್? ಎಷ್ಟು ವೆಂಟಿಲೇಟರ್ ಗಳು ಇವೆ? ಎಷ್ಟರ ಮಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿದೆ? ಅಂಬ್ಯುಲೆನ್ಸ್ ಎಷ್ಟಿವೆ? ಕೊವಿಡ್ ಸೋಂಕಿತರಿಗೆ ಎಷ್ಟು ಖರ್ಚು ಮಾಡಿದ್ದೇವೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button