ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೆ ಇನ್ನೊಂದೆಡೆ ಉಗ್ರರ ಆತಂಕ ಕೂಡ ಆರಂಭವಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ 17 ಜನ ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಶಂಕಿತ ಉಗ್ರರು ನಿಷೇಧಿತ ಐಸಿಸ್ ಜೊತೆ ನಂಟು ಹೊಂದಿದ್ದು, ಬೆಂಗಳೂರಿನಲ್ಲಿ ಲಘು ಸ್ಪೋಟಕಗಳನ್ನ ತಯಾರಿಸಿ ರಾಜ್ಯದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದೇ ವರ್ಷದ ಜನವರಿಯಲ್ಲಿ ಎನ್ಐಎ, ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು, ರಾಜ್ಯದ ಐಎಸ್ ಡಿ ಅಧಿಕಾರಿಗಳು ಬೆಂಗಳೂರಿನ ಗುರಪ್ಪನಪಾಳ್ಯದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ವೇಳೆ ಗುರಪ್ಪನಪಾಳ್ಯ ನಿವಾಸಿ ಮೆಹಬೂಬ್ ಪಾಷ ಎಂಬಾತನ ಮನೆಯಲ್ಲಿ ಉಗ್ರ ಚಟುವಟಿಕೆಗಳನ್ನ ನಡೆಸುತ್ತಿರುವುದು ಪತ್ತೆಯಾಗಿತ್ತು. ಬಳಿಕ ಪ್ರಕರಣ ಕೈಗೆತ್ತಿಕೊಂಡ ಎನ್ಐಎ ತೀವ್ರ ತನಿಖೆ ನಡೆಸಿದ್ದು ಈ ವೇಳೆ ಕೆಲವು ಸ್ಪೋಟಕ ಮಾಹಿತಿಗಳನ್ನ ಹೊರ ಹಾಕಿದೆ.
ಬಂಧಿತ ಶಂಕಿತ ಉಗ್ರರು ಕರ್ನಾಟಕ, ತಮಿಳುನಾಡು ಹಾಗೂ ದಕ್ಷಿಣ ಭಾರತದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು. ಪ್ರಮುಖ ಆರೋಪಿ ತಮಿಳುನಾಡಿನ ಕಡಲೂರಿನ ಖ್ವಾಜಾ ಮೊಹೀನುದ್ದೀನ್ ಸೂಚನೆಯಂತೆ ನಗರದಲ್ಲಿ ಮೆಹಬೂಬ್ ಪಾಷ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದ ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ