ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಬುಧವಾರ 20ನೇ ದಿನ ಪೂರೈಸಿದೆ.
೧೦ ಜುಲೈ ೨೦೨೦ ರಿಂದ ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಯುತ್ತಿದೆ. ಆದರೆ ಸರಕಾರ ಈವರೆಗೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ, ಮಾತುಕತೆಯನ್ನೂ ನಡೆಸಿಲ್ಲ ಎನ್ನುವುದು ಅವರ ಆರೋಪವಾಗಿದೆ.
ಪ್ರೋತ್ಸಾಹಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ಒಂದೇ ನಿಶ್ಚಿತ ಗೌರವಧನ ರೂ.೧೨,೦೦೦ ಪ್ರತಿತಿಂಗಳು ನೀಡಬೇಕು ಎನ್ನುವುದು ಪ್ರಧಾನ ಬೇಡಿಕೆಯಾಗಿದೆ.
ಸೋಂಕಿತರ ನಡುವೆ ದಿನನಿತ್ಯವೂ ಕೆಲಸ ಮಾಡುವ ಈ ಕಾರ್ಯಕರ್ತೆಯರ ಆರೋಗ್ಯರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಕಾರ್ಯಕರ್ತೆಯರಿಗೆ ಅಗತ್ಯವಾಗಿ ಬೇಕಾದ ಮಾಸ್ಕ್, ಫೇಸ್‌ಶೀಲ್ಡ್, ಹ್ಯಾಂಡ್ಗ್ಲೌಸ್, ಸ್ಯಾನಿಟೈಜರ ಇತ್ಯಾದಿಗಳನ್ನು ನೀಡಲಾಗಿಲ್ಲ. ಅದರಿಂದ ಅವರೆಲ್ಲರೂ ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಸೋಂಕಿತರ ನಡುವೆ ಕೆಲಸ ಮಾಡುತ್ತಿದ್ದಾರೆ. ಅದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಂಕು ತಗುಲಿಸಿಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರವೇ ಅಂದಾಜು ಮಾಡಿರುವಂತೆ ಈ ಮುಂದಿನ ದಿನಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ, ಪ್ರತಿ ದಿನವೂ ಜನರೊಂದಿಗೆ ಬೆರೆತು ಕೆಲ ಮಾಡುವ ಆಶಾಕಾರ್ಯಕರ್ತೆಯರು ಹೆಚ್ಚು ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೊರೋನಾ ಸೋಂಕು ನಿಯಂತ್ರಿಸಲು ಅಮೂಲ್ಯವಾದ ಸೇವೆಸಲ್ಲಿಸುತ್ತಿರುವ ಆಶಾಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸುವ ಎಲ್ಲಾ ರಕ್ಷಣಾಸಾಮಗ್ರಿಗಳನ್ನು ಸಾಷ್ಟು ಪ್ರಮಾಣದಲ್ಲಿ ನೀಡಬೇಕೆನ್ನುವುದು ಅವರ ಮತ್ತೊಂದು ಬೇಡಿಕೆ.
ಹೋರಾಟದಲ್ಲಿ ಗೀತಾ ರಾಯಗೋಳ, ರೂಪಾ ಅಂಗಡಿ, ಸುಜಾತಾ ಕಾಡಮಠ, ಸರೋಜಾ, ರೇಖಾ ಮುಂತಾದ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಇಂದು ರಾಜ್ಯಾದ್ಯಂತ ಆಶಾಕಾರ್ಯಕರ್ತೆಯರ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ