
ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೊನಾ ಸೋಂಕು ನಿಯಂತ್ರಿಸಲು ಕೊವಿಡ್ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ರಷ್ಯಾದಲ್ಲಿ ಜಗತ್ತಿನ ಮೊಟ್ಟ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಅಲ್ಲಿನ ಸರಕಾರ ಅನುಮೋದನೆ ನೀಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಸ್ವತಃ ತಮ್ಮ ಮಗಳಿಗೆ ಕೊರೊನಾ ಲಸಿಕೆ ಪ್ರಯೋಗಿಸಲಾಗಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಶೀಘ್ರದಲ್ಲೇ ಈ ಲಸಿಕೆ ಸಾರ್ವಜನಿಕರ ಬಳಕೆಗೆ ಬಿಡುಗಡೆ ಆಗಲಿದೆ ಎಂದು ಘೋಷಿಸಿದ್ದಾರೆ.
ಮಾಸ್ಕೋದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಮತ್ತು ಪ್ರಯೋಗ ನಡೆಸಿದೆ. ಈ ಲಸಿಕೆಯನ್ನು ಎರಡು ತಿಂಗಳ ಕಾಲ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿರುವುದಾಗಿ ರಷ್ಯಾದ ರಕ್ಷಣಾ ಸಚಿವಲಯ ತಿಳಿಸಿದೆ. ಜೂನ್ 18ರಿಂದ ಕ್ಲಿನಿಕಲ್ ಟ್ರಯಲ್‌ಗಳನ್ನು (ಮನುಷ್ಯರ ಮೇಲೆ) ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಎರಡನೇ ಗುಂಪು ಜುಲೈ 20ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ