ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಕೊರೋನಾ ಸೊಂಕಿತರ ಆರೈಕೆ ಮತ್ತು ಸುರಕ್ಷತೆಗಾಗಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾಡುತ್ತಿರುವ ಸೇವೆ ಮಾದರಿಯಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು.
ಶನಿವಾರದಂದು ಇಲ್ಲಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರೋನಾ ಸೋಂಕಿತರಿಗೆ ಕೊಡಮಾಡಿದ ವೈದ್ಯಕೀಯ ಉಪಕರಣಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೋರೋನಾ ಇಂದು ಪ್ರತಿ ಹಳ್ಳಿ -ಹಳ್ಳಿಗೆ ಪ್ರವೇಶಿಸುತ್ತಿದೆ, ಜಗತ್ತಿನಾದ್ಯಂತ ದಿನೇದಿನೇ ವ್ಯಾಪಿಸುತ್ತಿರುವ ಈ ಸಾಂಕ್ರಾಮಿಕ ರೋಗಕ್ಕೆ ಇದುವರೆಗೂ ಲಸಿಕೆ ಬಿಡುಗಡೆಯಾಗಿಲ್ಲ. ಇದರಿಂದ ರೋಗಿಗಳೇನೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದಕ್ಕೆ ಅಗತ್ಯವಿರುವ ಚಿಕಿತ್ಸೆಗಳಿಂದ ಸೋಂಕಿತರನ್ನು ಗುಣಪಡಿಸುತ್ತಿದ್ದೇವೆ. ಸೋಂಕಿತರ ಆರೈಕೆಗಾಗಿ ಜಾರಕಿಹೊಳಿ ಸಹೋದರರು ಪ್ರತಿ ಹಂತ-ಹಂತದಲ್ಲೂ ಆರೋಗ್ಯ ಇಲಾಖೆಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತಾ ಬಂದಿದ್ದಾರೆ ಎಂದು ಜಾರಕಿಹೊಳಿ ಅವರ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಸೋಂಕಿತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಸೋಂಕಿತರಿಗೆ ಹಾಗೂ ಆರೋಗ್ಯ ಇಲಾಖೆಯ ವಾರಿಯರ್ಸ್ಗೆ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿರುವ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಾಲೂಕಾಡಳಿತ ವತಿಯಿಂದ ಕೃತಜ್ಞತೆ ಸಲ್ಲಿಸಿದರು.
ಹಿರಿಯ ತಜ್ಞ ವೈದ್ಯ ಡಾ. ಆರ್.ಎಸ್.ಬೆಣಚಿನಮರಡಿ ಮಾತನಾಡಿ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ದಾಖಲಾಗಿರುವ ರೋಗಿಗಳ ಕಡೆಗೆ ಜಾರಕಿಹೊಳಿ ಸಹೋದರರು ವಿಶೇಷ ಗಮನ ನೀಡುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಮತ್ತೆ ಎಂದಿನಂತೆ ಸಮಾಜದೊಂದಿಗೆ ಬೆರೆಯಬೇಕೆನ್ನುವ ಅವರ ಆಶಯ ಮೆಚ್ಚುವಂತದ್ದು. ಸೋಂಕಿತರೆಂದರೆ ಹೆದರುವ ಇಂದಿನ ಪರಿಸ್ಥಿತಿಯಲ್ಲಿ ಅವರ ಆರೈಕೆ ಮತ್ತು ಸುರಕ್ಷತೆಗಾಗಿ ಆರೋಗ್ಯ ಇಲಾಖೆಗೆ ಬೆನ್ನೆಲುಬಾಗಿ ನಿಂತು ಸೋಂಕಿತರ ಹಿತರಕ್ಷಣೆಗೆ ಕಟಿಬದ್ದರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಮಲ್ಲಾಪುರ ಪಿ.ಜಿ. ಹಾಗೂ ಮೂಡಲಗಿಯಲ್ಲಿ ಕೇಂದ್ರಿಯ ಆಮ್ಲಜನಕ ಪೂರೈಕೆಯ ಘಟಕ ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಇಲ್ಲಿಯ ಕೋವಿಡ್ ಕೇರ್ ಸೆಂಟರಗೆ ೩೦೦ ಎನ್-೯೫ ಮಾಸ್ಕ್, ೩೩೦ ಪಿಪಿಇ ಕಿಟ್, ೩೦೦ ಕೈಗವಸು, ೩೩೦ ಮುಖಗವಸು, ಪುಟ್ ಆಪ್ರೇಟರ್ ಸೈನಿಟೈಸರ್, ಫಲ್ಸ್ ಆಕ್ಸಿಮೀಟರ್, ಸ್ಟೇಟಸ್ಸ್ಕೋಪ್, ಥರ್ಮಲ್ಸ್ಕಾನರ್, ಬಿ.ಪಿ.ಆಪ್ರೇಟರ್ಸ್, ಗ್ಲೋಕೊಮಿಟರ್, ೫೦೦ ಗ್ಲೋಕೊಮಿಟರ್ ಸ್ಟೀಪ್ಸ್, ಸೈನಿಟೈಸರ್ ಸ್ಪ್ರೇ, ೨೦೦ ಆಕ್ಸಿಜನ್ ಮಾಸ್ಕ್, ೨೦೦ ನೇಜಲ್ದ ಕ್ಯಾನುಲಾ, ೫೦೦ ಸರ್ಜಿಕಲ್ ಮಾಸ್ಕ್, ೫೦೦ ಸರ್ಜಿಕಲ್ ಕ್ಯಾಪ್ಗಳನ್ನು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲದಾರ ದಿಲಶಾದ ಮಹಾತ, ಬಿಇಓ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಹಾಲಪ್ಪ ಬಾಲದಂಡಿ, ಡಾ.ಮಹೇಶ ಕೋಣಿ, ಆರೋಗ್ಯ ನಿರೀಕ್ಷಕ ಶಂಕರ ಅಂಗಡಿ, ಪ್ರಾಂಶುಪಾಲ ಭಾವಿಕಟ್ಟಿ ಸೇರಿದಂತೆ ಅನೇಕರು ಇದ್ದರು.
ಕೋರೋನಾ ವೈರಸ್ನಿಂದ ಯಾರೂ ಭಯಪಡಬೇಡಿ, ಈಗಾಗಲೇ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ದಾಖಲಾಗಿರುವ ಎಲ್ಲ ಸೋಂಕಿತರಿಗೆ ಅಗತ್ಯವಿರುವ ಕಿಟ್ಗಳನ್ನು ನೀಡಲಾಗುತ್ತಿದೆ. ಜೊತೆಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯವರ ಸುರಕ್ಷತೆಗಾಗಿಯೂ ಮೆಡಿಕಲ್ ಕಿಟ್ಗಳನ್ನು ನೀಡಲಾಗುತ್ತಿದೆ. ಮಲ್ಲಾಪುರ ಪಿ.ಜಿ. ಮತ್ತು ಮೂಡಲಗಿಯಲ್ಲಿ ಆಕ್ಸಿಜನ್ ಪೂರೈಕೆಯ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಡ್ಗಳನ್ನು ವಿಸ್ತರಿಸಿ ಅಲ್ಲಿಯೂ ಕೇಂದ್ರಿಯ ಆಮ್ಲಜನಕ ಪೂರೈಕೆ ಘಟಕವನ್ನು ಪ್ರಾರಂಭಿಸಲಾಗುವುದು.
-ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ