ಕೆಪಿಸಿಸಿ ವಕ್ತಾರರಾಗಿ ನೇಮಕ – ಅನುಭವ, ಸಾಮರ್ಥ್ಯಕ್ಕೆ ಸಂದ ಗೌರವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಕಾಂಗ್ರೆಸ್ ರಾಜ್ಯ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ರಾಜ್ಯ ಕಾಂಗ್ರೆಸ್ ನಲ್ಲಿ ಅತ್ಯಂತ ಪ್ರಭಾವಿಯಾಗಿದ್ದು, ಈವರೆಗೆ ನೀಡಲಾಗಿದ್ದ ಎಲ್ಲ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಯಾವುದೇ ವಿಷಯವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗಿದೆ. ಇದನ್ನು ಗಮನಿಸಿ ಅವರಿಗೆ ಈ ಮಹತ್ವದ ಹುದ್ದೆಯನ್ನು ನೀಡಲಾಗಿದೆ.
ನಿಮ್ಮ ಸಾಮರ್ಥ್ಯ ಗಮನಿಸಿ ನೇಮಕ
ಮಾಧ್ಯಮಗಳಲ್ಲಿ ನಮ್ಮ ವಿಚಾರ, ದೃಷ್ಟಿಕೊನ ಪರಿಣಾಮಕಾರಿಯಾಗಿ ಬಿಂಬಿತವಾಗಬೇಕಾಗಿರುವುದು ಅಗತ್ಯವಾಗಿದೆ. ತಮಗಿರುವ ಅನುಭವ, ತಿಳಿವಳಿಕೆಗಳೊಂದಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಗಮನಿಸಿ ನಿಮ್ಮನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ತಕ್ಷಣವೇ ಅಧಿಕಾರ ವಹಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದೂ ಸೂಚಿಸಿದ್ದಾರೆ.
ಧನ್ಯವಾದ ಸಲ್ಲಿಸಿದ ಲಕ್ಷ್ಮಿ ಹೆಬ್ಬಾಳಕರ್
ನನ್ನ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟು (Spoke Person) ಕೆಪಿಸಿಸಿ ವಕ್ತಾರೆಯನ್ನಾಗಿ ನೇಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಪಕ್ಷ ನಿಷ್ಠೆಯಿಂದ ಪಕ್ಷದ ಏಳಿಗೆಗಾಗಿ ಹಾಗೂ ಜನರ ಹಿತಕ್ಕಾಗಿ ಶಿಸ್ತು, ಸಂಯಮದ ಸಿಪಾಯಿಯಾಗಿ ಕೊಟ್ಟಂತಹ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರೀಯಾಂಕ ಗಾಂಧಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ನಮ್ಮ ಕರ್ನಾಟಕದ ಹಿರಿಯ ನಾಯಕರು ಹಾಗೂ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ, ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿ ಗೆ, ಪಕ್ಷದ ಕಾರ್ಯಾಧ್ಯಕ್ಷರುಗಳಾದ ಸತೀಶ ಜಾರಕಿಹೊಳಿಯವರಿಗೆ, ಈಶ್ವರ ಖಂಡ್ರೆಯವರಿಗೆ, ಸಲೀಂ ಅಹಮ್ಮದ್ ಅವರಿಗೆ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರಿಗೆ, ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದೂ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಿ, ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದೂ ವಾಗ್ದಾನ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ