Latest

ಡಿ.ಕೆ.ಶಿವಕುಮಾರ್ ರೌದ್ರಾವತಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೋನಾದಂತಹ ಕಠಿಣ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಮಿಡಿಯುವ ಬದಲು ಸ್ವಾರ್ಥ ರಾಜಕಾರಣ ಮಾಡಿದೆ. ರೈತರು, ಬಡವರು, ಕಾರ್ಮಿಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ, ಅಕ್ರಮ, ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿದರು. ಕೊರೋನಾ ಪರಿಸ್ಥಿತಿಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಇದನ್ನು ದೇವರ ಆಟ ಎಂದು ಹೇಳುತ್ತಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಅಂತಾ ಇದ್ದ ಮೇಲೆ ಅದರದ್ದೇ ಜವಾಬ್ದಾರಿ ಇರುತ್ತದೆ ಅದನ್ನು ಬಿಟ್ಟು ದೇವರ ಆಟ ಎಂದರೆ ಹೇಗೆ? ಕಳೆದ ಅಧಿವೇಶನ ನಡೆಯುವಾಗ ಈ ಪರಿಸ್ಥಿತಿ ಎದುರಾಗಿತ್ತು. ದೇಶದ ಪ್ರಧಾನಿಗಳು ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿ ಲಾಕ್ ಡೌನ್ ಹೇರಿದರು. ದೀಪ ಹಚ್ಚಲು, ಗಂಟೆ ಹೊಡೆಯಲು ನಾಲ್ಕು ದಿನ ಸಮಯ ಕೊಟ್ಟರು. ನಾವು ಅದನ್ನು ಸ್ವೀಕರಿಸಿದೆವು. ಮುಖ್ಯಮಂತ್ರಿಗಳು ಸ್ವಲ್ಪ ಮನಸ್ಸು ಮಾಡಿ ಒಂದು ದಿನದೊಳಗೆ ಹಳ್ಳಿಗೆ ಹೋಗುವವರು ಹೋಗಿ ಎಂದರು.

ರಾಜ್ಯದ ಎಲ್ಲ ಪಕ್ಷಗಳು ಸರ್ಕಾರಕ್ಕೆ ಸಹಕಾರ, ಬೆಂಬಲ ನೀಡಿವೆ. ಪ್ರಧಾನಮಂತ್ರಿಗಳು 21 ದಿನಗಳಲ್ಲಿ ಈ ಯುದ್ಧ ಗೆಲ್ಲುತ್ತೇವೆ ಅಂತಾ ಹೇಳಿದ್ದರೂ ನಾವು ಸಹಕಾರ ನೀಡುತ್ತಲೇ ಬಂದಿದ್ದೇವೆ. ಆದರೆ ಆಡಳಿತರೂಢ ಬಿಜೆಪಿಯವರು ವಿವಿಧ ಇಲಾಖೆಗಳು, ಅಕ್ಷಯ ಪಾತ್ರೆಯವರು, ಇನ್ಫೋಸಿಸ್ ಸಂಸ್ಥೆಯವರು ಜನರಿಗೆ ಕೊಟ್ಟ ಆಹಾರ ಕಿಟ್ ಗಳ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚಿದರು. ಆನೇಕಲ್ ನಲ್ಲಿ ಬಾಣಂತಿಯರು, ಮಕ್ಕಳ ಪೌಷ್ಠಿಕ ಆಹಾರ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ಅಕ್ರಮ ಮಾಡಿದರು. ಯಾವ ವ್ಯವಸ್ಥೆಯಲ್ಲಿ ಈ ಸರ್ಕಾರ ನಡೆಯುತ್ತಿದೆ? ನಾವು ರಾಜಕಾರಣ ಮಾಡಬೇಕು, ಮಾಡೋಣ. ಆದರೆ ಕೊರೋನದಂತಹ ಪರಿಸ್ಥಿಯಲ್ಲಿ ಬಡವರಿಗೆ ಹಂಚುವ ಆಹಾರದಲ್ಲೂ ರಾಜಕಾರಣ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.

ಎಷ್ಟು ರೈತರಿಗೆ ನೆರವಾಗಿದ್ದೀರಿ?

ಹೂವು, ತರಕಾರಿ, ಹಣ್ಣು ಬೆಳೆದ ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೇವೆ ಎಂದು ಹೇಳಿದಿರಿ. ಎಷ್ಟು ರೈತರ ಬೆಳೆ ಖರೀದಿ ಮಾಡಿದ್ದೀರಿ, ಎಷ್ಟು ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೀರಿ, ಎಷ್ಟು ರೈತರಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದೀರಿ? ಕೃಷಿ ಸಚಿವರು ಉತ್ತರ ನೀಡಲಿ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡಲ್ಲ ಅಂತಾ ಯಡಿಯೂರಪ್ಪನವರು ಹೇಳಿಕೆ ನೀಡಿದರು. ಆದೇಶ ಹೊರಡಿಸಿದರು. ಆದರೆ ಎಷ್ಚು ಅಧಿಕಾರಿಗಳು ಹೋಗಿ ಬೆಳೆ ನಷ್ಟದ ಸಮೀಕ್ಷೆ ಮಾಡಿದ್ದಾರೆ?

ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ:

ಈ ಸರ್ಕಾರ ರೈತರು, ಕಾರ್ಮಿಕರನ್ನು ರಕ್ಷಿಸುವಲ್ಲೂ ವಿಫಲವಾಯಿತು. ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ಏರಿಕೆ ವಿರುದ್ಧ ನಾವು ಹೋರಾಟ ಮಾಡಿದ ಮೇಲೆ ದೊಡ್ಡ ಮನಸ್ಸು ಮಾಡಿ ಅವರಿಗೆ ಐದು ದಿನಗಳ ಕಾಲ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ಅಶೋಕ್ ಅವರು ತಮ್ಮ ಆತ್ಮ ಸಂತೋಷಕ್ಕಾಗಿ ನನ್ನ ಚೆಕ್ ಅನ್ನು ಬೋಗಸ್ ಎಂದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಏನು?

ಈ ಕಠಿಣ ಸಮಯದಲ್ಲಿ ನಮ್ಮ ಹೃದಯ ಜನರಿಗಾಗಿ ಮಿಡಿಯುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಈ ಕಾಯಿಲೆ ಹರಡಿದೆ. ಹೊರ ದೇಶದಿಂದ ಬರುವವರನ್ನು ಮುಂಚಿತವಾಗಿಯೇ ತಡೆದಿದ್ದರೆ, ಇವತ್ತು ಇಷ್ಟು ತೊಂದರೆ ಆಗುತಿತ್ತಾ? ನಿಮ್ಮ ಬೇಜವಾಬ್ದಾರಿ ತನಕ್ಕೆ ಇಡೀ ದೇಶ ನರಳುವಂತಾಗಿದೆ. ಈ ಸಮಯದಲ್ಲಿ ಎಲ್ಲ ಪಕ್ಷಗಳು ಸರ್ಕಾರಕ್ಕೆ ಬೆಂಬಲವಾಗಿ ನಿಂತವು.

ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡಬೇಕು ಅಂತಾ ನಾವು ಮನವಿ ಮಾಡಿದೆವು. ಸರ್ಕಾರವೂ ಒಂದಷ್ಟು ಘೋಷಣೆ ಮಾಡಿತು. ಯಡಿಯೂರಪ್ಪನವರು 1610 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಚಾಲಕರಿಗೆ, ನೇಕಾರರಿಗೆ, ಮಡಿವಾಳರಿಗೆ ಹಾಗೂ ಇತರೆ ವರ್ಗದವರಿಗೆ ಪ್ರತಿ ತಿಂಗಳು 10 ಸಾವಿರ ಕೊಟ್ಟು ಸಹಾಯ ಮಾಡಿ ಅಂತಾ ಮನವಿ ಮಾಡಿದೆವು. ಆದರೆ ಮುಖ್ಯಮಂತ್ರಿಗಳು ಚಾಲಕರಿಗೆ 5 ಸಾವಿರ, ನೇಕಾರರಿಗೆ 2 ಸಾವಿರ, ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಘೋಷಣೆ ಮಾಡಿದರು.

ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಎಷ್ಟು ಜನಕ್ಕೆ ತಲುಪಿದೆ? ಈ ಬಗ್ಗೆ ಮಾಹಿತಿ ಪಡೆಯೋಣ ಎಂದರೆ ಕಾರ್ಮಿಕ ಸಚಿವರು ಇಲ್ಲಿ ಇಲ್ಲ. ಇವತ್ತಿನವರೆಗೂ ಶೇ.10-20 ರಷ್ಟು ಜನರಿಗೆ ಈ ಪರಿಹಾರ ಹಣ ತಲುಪಿಲ್ಲ. ಹಳ್ಳಿಯಲ್ಲಿರುವ ಕ್ಷೌರಿಕನಾಗಲಿ, ಚಾಲಕನಾಗಲಿ ಮೋಸ ಮಾಡಲು ಸಾಧ್ಯವಾ? ಸರ್ಕಾರ ತನ್ನ ಸಿಬ್ಬಂದಿ ಬಳಸಿಕೊಂಡು ಸಮೀಕ್ಷೆ ಮಾಡಿ ಅವರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ನೀಡಿ ಫೋಟೋ ತೆಗೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ?

ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರೆ, ಕಾರ್ಮಿಕರು ಯಾಕೆ ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದರು. ಸಾಂಪ್ರದಾಯಿಕ ವೃತ್ತಿ ಅವಲಂಭಿಸಿರುವವರು ಕೇವಲ ಕಾರ್ಮಿಕರಲ್ಲ ಸ್ವಾಮಿ, ಅವರು ಈ ದೇಶ ನಿರ್ಮಾಣ ಮಾಡುತ್ತಿರುವವರು. ಇಂದು ನಾವು ಚೆನ್ನಾಗಿ ಕಾಣುತ್ತೇದ್ದೇವೆ, ಒಳ್ಳೆಯ ಬಟ್ಟೆ ಹಾಕಿಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಅವರೇ ಕಾರಣ. ಅವರನ್ನು ನಾವು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು, ಅವರ ಕಷ್ಟಕ್ಕೆ ಸ್ಪಂದಿಸಿ 24 ರಿಂದ 48 ಗಂಟೆಗಳಲ್ಲಿ ಅವರಿಗೆ ಪರಿಹಾರ ತಲುಪುವಂತೆ ಮಾಡಬೇಕಿತ್ತು. ಆದರೆ ಇವತ್ತಿನವರೆಗೂ ಅದು ಸಾಧ್ಯವಾಗಿಲ್ಲ.

ಈ ಸರ್ಕಾರಕ್ಕೆ ಕೊನೇ ಪಕ್ಷ ವೃದ್ಧರಿಗೆ, ವಿಧವೆಯರಿಗೆ, ವಿಶೇಷಚೇತನರಿಗೆ ಪಿಂಚಣಿ ನೀಡಲು ಸಾಧ್ಯವಾಗಿಲ್ಲ. ಅದನ್ನು ನೀಡಲು ಈಗ ಕೆ1, ಕೆ2 ಅಂತಾ ಏನೇನೋ ವಿಂಗಡಣೆ ಮಾಡಿದ್ದಾರೆ. 20, 30 ವರ್ಷಗಳಿಂದ 500, 1000 ರೂಪಾಯಿ ಕೊಡಲಾಗುತ್ತಿದೆ. ಇದನ್ನು ನೀಡುವುದರಲ್ಲೂ ರಾಜಕೀಯ ಮಾಡಬೇಕಾ? ಎಂದು ಕೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button