ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತ ವಿರೋಧಿ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ ವಿರೋಧಿಸಿ ಅನ್ನದಾತ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಸಜ್ಜಾಗಿದ್ದಾರೆ.
ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ರಸ್ತೆ ತಡೆ ನಡೆಸುತ್ತಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನೆ ಮುಂದುವರೆದಿದೆ.
ಕಾರ್ಪೊರೇಷನ್, ಕೆ ಆರ್ ವೃತ್ತ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲು ರೈತರು ಬೀದಿಗಿಳಿದಿದ್ದಾರೆ. ಗೊರಗುಂಟೆ ಪಾಳ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನೂರಾರು ರೈತರನ್ನು ವಶಕ್ಕೆ ಪಡೆದ ಪೊಲೀಸರು ವಾಹನಗಳಲ್ಲಿ ಕರೆದೊಯ್ದು ಫ್ರೀಡಂ ಪಾರ್ಕ್ ಗೆ ಬಿಟ್ಟಿದ್ದಾರೆ.
ಮೈಸೂರಿನಲ್ಲಿಯೂ ಪ್ರತಿಭಟನೆ ಹೆಚ್ಚುತ್ತಿದ್ದು, ವಾಹನಗಳನ್ನು ತಡೆದು, ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ರಸ್ತೆ ಮಧ್ಯೆಯೇ ಕುಳಿತು ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ