Kannada NewsKarnataka NewsLatest

15 ದಿನದಲ್ಲಿ ಬೈಪಾಸ್ ರಸ್ತೆ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

೭೦ ಲಕ್ಷ ರೂ.ಅನುದಾನದಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ಗಣ್ಯರಿಂದ ಇಂದು ಚಾಲನೆ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ:   ಕುಸಿದಿರುವ ಮೆಳವಂಕಿ ಸೇತುವೆ ಬಳಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬುಧವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.

ನಂತರ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಕಳೆದ ಸೋಮವಾರದಂದು ಬೆಳಗಿನ ಜಾವ ಹಠಾತ್ತನೇ ದಂಡಿನ ಮಾರ್ಗ ರಸ್ತೆಯ ಮೆಳವಂಕಿ ಸೇತುವೆ ಕುಸಿದು ಬಿದ್ದಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಗೋಕಾಕದಿಂದ ಕೌಜಲಗಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರಿಂದ ತುಂಬ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೇತುವೆ ಕುಸಿತಗೊಂಡ ಕೇವಲ ಒಂದು ಗಂಟೆಯೊಳಗೆ ಸೇತುವೆ ಬಳಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ೭೦ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಮೆಳವಂಕಿ ರಸ್ತೆಯ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ರಸ್ತೆ ನಿರ್ಮಾಣದ ನಂತರ ಅನುಕೂಲವಾಗಲಿದೆ. ಕೆಲವು ಕಡೆಗಳಲ್ಲಿ ಸೇತುವೆಗಳು ಬಿದ್ದು ವರ್ಷಗಳೇ ಉರುಳುತ್ತಿದ್ದರೂ ಅಂತಹುಗಳನ್ನು ಕೇಳುವವರ ಗತಿ ಕೂಡಾ ಇರುವದಿಲ್ಲ, ಇಂತಹ ಸನ್ನಿವೇಶದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದೆನ್ನುವ ಉದ್ದೇಶದಿಂದ ತತ್‌ಕ್ಷಣವೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿರುವುದು ಅವರ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಶಾಸಕರನ್ನು ಪಡೆದ ನಾವುಗಳು ಧನ್ಯರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮುಖಂಡರಾದ ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಭೀಮಪ್ಪ ಚಿಪ್ಪಲಕಟ್ಟಿ, ಈರಪ್ಪ ಬೀರನಗಡ್ಡಿ, ಸತ್ತೆಪ್ಪ ಬಬಲಿ, ಅಲ್ಲಪ್ಪ ಕಂಕಣವಾಡಿ, ರಾಮಪ್ಪ ಕಾಪಸಿ, ಸಣ್ಣದೊಡ್ಡಪ್ಪ ಕರೆಪ್ಪನ್ನವರ, ಮುತ್ತೆಪ್ಪ ಹಡಗಿನಾಳ, ನಾಗಪ್ಪ ಮಂಗಿ, ಕಾಮಶಿ ಕರೆನ್ನವರ, ಎ.ಎಸ್.ಅಗ್ನೆಪ್ಪಗೋಳ, ರಮೇಶ ಬೀರನಗಡ್ಡಿ, ಹಣಮಂತಗೌಡ ಪಾಟೀಲ, ಲೋಕೋಪಯೋಗಿ ಇಲಾಖೆಯ ಎಇ ನಾಗಾಭರಣ.ಕೆ.ಪಿ, ಗುತ್ತಿಗೆದಾರ ಹಣಮಂತ ದಾಸನವರ ಮುಂತಾದವರು ಉಪಸ್ಥಿತರಿದ್ದರು.

 

ಬದಾಮಿ-ಗೊಡಚಿ-ಗೋಕಾಕ ಫಾಲ್ಸ್ ರಾಜ್ಯ ಹೆದ್ದಾರಿ ೧೩೪ ಚೈನೆಜ್ ೧೦೭.೮೦ರಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರ ಸಂಚಾರಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ೭೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ ೫ರಂದು ಬೆಳಗಿನ ಸಮಯ ಮೆಳವಂಕಿ ಬಳಿ ೧೯೮೫ರಲ್ಲಿ ನಿರ್ಮಾಣವಾಗಿದ್ದ ಸೇತುವೆ ಹಠಾತ್ತಾಗಿ ಕುಸಿದು ಬಿದ್ದಿದೆ. ಸುದೈವದ ಸಂಗತಿಯೆಂದರೆ ಕುಸಿದ ಬೀಳುವ ವೇಳೆಯಲ್ಲಿ ಅಲ್ಲಿ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ಇದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕುಸಿದು ಬಿದ್ದಿರುವ ಸೇತುವೆಯ ಪಕ್ಕದಲ್ಲಿ ಸಾರ್ವಜನಿಕ ಸಂಚಾರಕ್ಕಾಗಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ. ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿ ೧೫ದಿನಗಳೊಳಗಾಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ರೈತರಿಗೂ ಸಹ ಅನುಕೂಲವಾಗಲಿದೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button