ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತಿಚಿಗೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಡಾ.ಅನಿಲ್ ಪಾಟೀಲ , ಕಾರ್ಯದರ್ಶಿಯಾಗಿ ಡಾ.ದೇವಗೌಡ ಮತ್ತು ಐಎಂಎ ಖಜಾಂಚಿಯಾಗಿ ಡಾ.ರವೀಂದ್ರ ಅನಗೋಳ ಸೇರಿದಂತೆ ಇನ್ನಿತರ ಆಡಳಿತ ಮಂಡಳಿಯ ಸದಸ್ಯರು ಪದಗ್ರಹಣ ಮಾಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಐಎಂಎ ರಾಜ್ಯ ಮಂಡಳಿಯ ನಿರ್ದೇಶಕ ಡಾ.ಶಿವಕುಮಾರ ಕುಂಬಾರ, ದೇಶದಲ್ಲಿ ಕೋವಿಡ್ ವೈರಸ್ ಹರಡಿದ ಸಂದರ್ಭದಲ್ಲಿ ದೇಶದಲ್ಲಿನ ಎಲ್ಲ ವೈದ್ಯರು ಸಮುದಾಯಕ್ಕೆ ಅಗತ್ಯವಾಗಿರುವ ತುರ್ತು ಸೇವೆಯನ್ನು ನೀಡುವ ಮೂಲಕ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೋವಿಡ್ ವಿರುದ್ದ ಹೋರಾಟದಲ್ಲಿ ಕೆಲ ವೈದ್ಯರು ಸಹ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆರೋಗ್ಯ ರಕ್ಷಣೆಯ ಸಂಕಲ್ಪ ಮಾಡಿರುವ ವೈದ್ಯಕೀಯ ಸೇವೆ ಇಂದು ಎಲ್ಲರ ಮನದಲ್ಲಿ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ಬೀಮ್ಸ್ ನಿದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು ಮಾತನಾಡಿ, ಐಎಂಎ ಸದಸ್ಯರು ಆಯಾ ಭಾಗದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸೋಂಕು ನಿಯಂತ್ರಣ ಮತ್ತು ರೋಗಿಗಳಿಗೆ ತುರ್ತು ಸೇವೆಯನ್ನು ನೀಡಿದ್ದಾರೆ. ಜ್ವರ ನಿಯಂತ್ರಣ ವಾರ್ಡಗಳನ್ನು ಸ್ಥಾಪಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಿದ ಹಾಗೂ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡುವಲ್ಲಿ ಮತ್ತು ಸಕಾಲದಲ್ಲಿ ವೈದ್ಯಕೀಯ ಸೇವೆಗಳನ್ನು ನೀಡಿದ ವೈದ್ಯರು ಅಭಿನಂದನಾರ್ಹರರು ಎಂದು ಅವರು ಹೇಳಿದರು.
ಸಂಘದ ನೂತನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ದೇವೆಗೌಡ ಅವರು ಮಾತನಾಡಿ ಸಮುದಾಯಗಳ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಸೋಂಕು ತಡೆಗಟ್ಟುವಿಕೆ ಕುರಿತು ಆರೋಗ್ಯ ಶಿಬಿರಗಳು, ಯೋಗ ಕಾರ್ಯಕ್ರಮ, ಜಾಗೃತಿ ಉಪನ್ಯಾಸಗಳು ಸೇರಿದಂತೆ ಮುಂಬರುವ ದಿನಗಳಲ್ಲಿ ವೈದ್ಯಕೀಯ ಸಂಘದ ವತಿಯಿಂದ ಕೈಗೊಳ್ಳಲಾಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ನೂತನ ಅಧ್ಯಕ್ಷ ಡಾ.ಅನಿಲ ಪಾಟೀಲ ಅವರು ಮಾತನಾಡಿ ವೈದ್ಯರು ವೈದ್ಯಕೀಯ ತಂತ್ರಜ್ಞಾನ ಮತ್ತು ನಾವಿನ್ಯತೆಯ ಉಪಚಾರ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆವಿದ್ದು, ಇದಕ್ಕಾಗಿ ನುರಿತ ತಜ್ಙರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ೫೦ ಹೊಸ ಸದಸ್ಯರನ್ನು ಸಂಘಕ್ಕೆ ಬರಮಾಡಿಕೊಳ್ಳಲಾಯಿತು. ಡಾ. ವೈಶಾಲಿ ದೇಶಪಾಂಡೆ ಪ್ರಾರ್ಥಿಸಿದರು. ಡಾ.ಮಿಲಿಂದ ಹಲಗೇಕರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ರಾಜಶ್ರೀ ಅನಗೋಳ ಕಾರ್ಯಕ್ರಮ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ