ರೋಬೋ ಸುಂದರಿ ಸೊಸೆಯಾಗಿ ಬಂದರೆ ಹೇಗಿರುತ್ತದೆ?

ನಿನ್ನೆ ನಿನ್ನದು ! ಇಂದು ನನ್ನದು ! ನಾಳೆ ಯಾರದು ?

ಪ್ರೊ. ಜಿ. ಎಚ್. ಹನ್ನೆರಡುಮಠ

ಇತ್ತೀಚೆಗೆ “ಹೈಟೆಕ್-ಹೈಫೈ-ಪಾಶ್‌ಲಿವಿಂಗ್” ಶಬ್ದಗಳು ಪುರಮಾಶಿ ಏರಿಬಂದು…. ಡಿಲಕ್ಸ…. ಹಾಗೂ ಲಗ್ಝುರಿ ಶಬ್ದಗಳು ಕೂಡ ಬೂಳಸುಬಿದ್ದ ತಂಗಳರೊಟ್ಟಿಯಾದವು !
ಮನುಷ್ಯ ಎಷ್ಟೇ ದೊಡ್ಡವನಾದರೂ ತಲೆಯ ಮಡ್ಡುಮಾತ್ರ ಅದೇ ಲಡ್ಡು….ಯಡ್ಡು…. ಜಿಡ್ಡು !
ನಿನ್ನೆಗಳನ್ನು ಮತ್ತೆಮತ್ತೆ ರಿನ್ಯೂ ಮಾಡುವದೇ ಇಂದಿನ ನವನವೀನ ಕಲಾಕೃತಿ !
ನಮ್ಮನ್ನು ಮಣ್ಣಿನಿಂದ-ಬೆವರಿನಿಂದ-ದುಡಿಮೆಯಿಂದ -ಹಸಿವೆಯಿಂದ ದೂರಮಾಡುವ ಆಧುನಿಕ ಸಂಸ್ಕೃತಿಯೇ ಈ ಹೈಫೈಗಳು ! ಹೈಫೈ ಅಂದರೆ ಸಾಕು ಪೈಸೆ…. ಸೈಸೈ ಅಂದು ಬಂದುಬಿಡುತ್ತದೆ.
ಒಂದು ಕಾಲಕ್ಕೆ ದೇವರನ್ನು ನೆನೆಯುವವರು ಬೇಡರ ಕಣ್ಣಪ್ಪನಂತಹ ಕಾಡಿನ ಹುಡುಗರಾಗಿದ್ದರು ! ಮಾದಾರ ಚನ್ನಯ್ಯನಂತೆ ಕುದುರೆ ಲಾಯದ ಲದ್ದಿ ಬಳೆಯುವ ಕೂಲಿಗಳಾಗಿದ್ದರು ! ಕುಂಬಾರ ಗುಂಡಯ್ಯನಂಥ ಮಣ್ಣು-ಮಡಿಕಿಯ ಮಕ್ಕಳಾಗಿದ್ದರು ! ಮೋಳಿಗೆಯ ಮಾರಯ್ಯ ಕಲ್ಯಾಣದಲ್ಲಿ ಕಟ್ಟಿಗೆ ಕಡಿದು ಮಾರಿ ಬದುಕುತ್ತಿದ್ದ. ಆಯ್ದಕ್ಕಿ ಮಾರಯ್ಯ ಬೀದಿಯ ಅಕ್ಕಿ ಆರಿಸುತ್ತಿದ್ದ. ಡೋಹರ ಕಕ್ಕಯ್ಯ, ಕಿನ್ನರ ಬ್ರಹ್ಮಯ್ಯ, ಹೆಂಡದ ಮಾರಯ್ಯ , ಕಂಬಳಿ ನಾಗಿದೇವ, ದೋಸೆಯ ಪಿಟ್ಟವ್ವೆ, ಕಿನ್ನರಿಯ ಬ್ರಹ್ಮಯ್ಯ, ಮಡಿವಾಳ ಮಾಚಯ್ಯ, ಹುಲ್ಲಕಾಯಕದ ಬಂಕಯ್ಯ, ಒಕ್ಕಲಿಗ ಮುದ್ದಯ್ಯ, ಸೂಜಿ ಕಾಯಕದ ರೆಮ್ಮವ್ವೆ, ಕಂಬಳಿ ನಾಗಿದೇವ, ನುಲಿಯ ಚಂದಯ್ಯ, ಸೂಳೆ ಸಂಕವ್ವೆ, ಕನ್ನದ ಬ್ರಹ್ಮಯ್ಯ ….. ಅಬ್ಬಬ್ಬಾ…. ಬದುಕು ಮಣ್ಣು-ಬೆವರು- ಬಿಸಿಲಿಗೆ ಹತ್ತಿರವಾಗಿತ್ತು !
ಜೀವನದ ತಳಸಂಸ್ಕೃತಿಯೇ ಶಿವಸಂಸ್ಕೃತಿಯ ಸೋಪಾನವಾಗಿತ್ತು !
ಮಣ್ಣು ಮೃತ್ಯುಂಜಯ ಲಿಂಗವಾಗಿತ್ತು .
ಕಲ್ಲು ಕಲ್ಲೇಶ್ವರ ಲಿಂಗವಾಗಿತ್ತು.
ಅಷ್ಟೇ ಅಲ್ಲ…. ಕಂಟಿ ಕೂಡ ಕಂಟೀ ಬಸವೇಶ್ವರನಾಗಿತ್ತು ! ಬದುಕು ಈ ನಿಸರ್ಗದೊಂದಿಗೆ ಅವಿನಾಭಾವ ಸಾಂಗತ್ಯ ಸಂಪಾದಿಸಿತ್ತು !
ಇತ್ತಿತ್ತಲಾಗಿ ಇಂಟರ್‌ನ್ಯಾಶನಲ್ ಯೋಗಾ ಸಿಸ್ಟಂಗಳು, ಅತ್ಯಾಧುನಿಕ ಯೋಗಾ ಸೆಂಟರುಗಳು, ಯೋಗಾಶ್ರಮಗಳು…. ಏಸಿ ಕಾರುಗಳಿಗೆ ಡನ್ಲಪ್ಪ ಕುರ್ಚಿಗಳಿಗೆ , ವಿಮಾನ ಯಾನಗಳಿಗೆ ಮೀಸಲಾಗಿ ಬಿಟ್ಟವು. ಒಬ್ಬ ಮಹಾಮಹರ್ಷಿಯ ಉಪನ್ಯಾಸವಿದ್ದರೆ ಅಲ್ಲಿ ನೂರಾರು ಹೈಫೈ ಕಾರುಗಳು !
ಹಿಂದೆ ಎಲ್ಲಮ್ಮನ ಗುಡ್ಡಕ್ಕೆ ಕೊಲ್ಲಾರಿ ಬಂಡಿಯಲ್ಲಿ ಹೋಗುತ್ತಿದ್ದರು. ಉಳವಿ-ಪ೦ಢರಪುರ- ಶ್ರೀಶೈಲ- ಕಾಶಿಗಳಿಗೆ ಕಾಲುನಡಿಗೆಯಲ್ಲಿ ಹೋಗುತ್ತಿದ್ದರು. ಈಗ ಅತ್ಯಾಧುನಿಕ ಕಾರು, ವಿಮಾನಯಾನ ಇದ್ದವರು ಮಾತ್ರ ವಿಶ್ವಾಸಾರ್ಹ ಯೋಗಿರಾಜರು. ಉಳಿದವರು ಕಾಮನ್ ಫೋಕು ಆಗಿ ತುಕ್ಕು ಹಿಡಿದಿರುವ ಗುಗ್ಗುಗಳು!
ಬಡವರ ಮನೆಯ ಒಂದು ಮುಟ್ಟಿಗಿ ಅವಲಕ್ಕಿಗೆ ಬಾಯ್ಬಿಡುವ ಶ್ರೀ ಕೃಷ್ಣಪರಮಾತ್ಮ ಈಗ ಇಲ್ಲವೇ ಇಲ್ಲ ! ಏನಿದ್ದರೂ ಈಗ ವಜ್ರಗಳಲ್ಲಿ ಲೆಕ್ಕ ! ಕಿರೀಟಗಳಲ್ಲಿ ಲೆಕ್ಕ ! ಬೆವರು ಹುಂಚೀಪಕ್ಕ !!
ದಿನಬೆಳಗಾದರೆ ನಮ್ಮ ಯೋಗಿಗಳು ಆಕಾಶಪಥದಲ್ಲಿ ಸಂಚರಿಸುತ್ತಾರೆ. ನಿನ್ನೆಮನ್ನೆಯವರೆಗೆ ವಿನೋಬಾಭಾವೆ ನಡೆಯುತ್ತಲೇ ಹೋಗುತ್ತಿದ್ದರು. ವಿನೋಬಾಭಾವೆಯವರೊಂದಿಗೆ ೧೯೫೮ ರಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ನಾನು ನಡೆಯುತ್ತಲೇ ಹೋಗಿದ್ದೆ. ಎಂಥಾ ಖುಶಿ !
ಬೌದ್ಧ ಬಿಕ್ಕುಗಳು, ಜೈನ ಮುನಿಗಳು ಅಂದಿನ ರೋಡುಗಳಿಲ್ಲದ ದುರ್ಗಮ ಕಾಡಾರಣ್ಯದಲ್ಲಿ ನಡೆಯುತ್ತಲೇ ಹೋಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯೋಗ-ಜ್ಞಾನ ಪ್ರಸಾರಮಾಡಿದರು.
ಶೂನ್ಯ ಸಿಂಹಾಸನಾಧೀಶ್ವರ ಎಂದು ನಮ್ಮಿಂದ ಕರೆಸಿಕೊಳ್ಳುವ ಅಲ್ಲಮಪ್ರಭು ಕೂಡಾ ಜೋಳಿಗೆಯ ಜಂಗಮ !
“ಬೆಟ್ಟಕ್ಕೆ ಚಳಿಯಾದೊಡೆ ಏನ ಹೊದಿಸುವಿರಯ್ಯಾ….” , “ಬೆಟ್ಟದ ನೆಲ್ಲೀಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? …..”ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸ !”….. ಇಂಥಾ ಅತ್ಯಗಾಧ ಪ್ರಕೃತಿ ಕಲ್ಪನೆಗಳನ್ನು ಮಹಾಕವಿ ವರ್ಡಸ್ವರ್ಥ, ಶಕ್ಸಪೀಯರ ಒಮ್ಮೆಯಾದರೂ ಅನುಭವಿಸಿದ್ದರೇ ? ಬೇಡರನ್ನು …..”ಕತ್ತಲೆಯ ತತ್ತಿಗಳು” ಎಂದು ರಾಘವಾಂಕ ಹರಿಶ್ಚಂದ್ರ ಕಾವ್ಯದಲ್ಲಿ ಕರೆದದ್ದು ನಿಸರ್ಗದ ಎಂಥಾ ರಾಸಕ್ರಿಯೆ ?
ಒಬ್ಬ ಬೇಡ ತರುಣಿ ಇನ್ನೊಬ್ಬ ಬೇಡ ತರುಣನೊಂದಿಗೆ ಪ್ರೇಮ ಮಿಲನಕ್ಕಾಗಿ ಅಗಾಧ ಕತ್ತಲೆ ಇರುವ ಕಾಡಿನ ಕಂಟಿಯೊಳಗೆ ಹೊಕ್ಕಳಂತೆ ! ಆದರೆ ಅಲ್ಲಿ ಅವಳ ಕಣ್ಣಿನ ಬೆಳಕಿನಿಂದಲೇ ಬೆಳಕು ಚಿಲ್ಲನೇ ಚಿಮ್ಮಿ ಬಂದಾಗ …. “ಅಯ್ಯೋ…. ಬೆಲ್ಲದ ಮಿಲನಕ್ಕೆ ಒಲ್ಲದ ಬೆಳಕು ಎಲ್ಲಿಂದ ಬಂತು ?”….ಅಂತ ದುಃಖಿತಳಾದಳಂತೆ ! ಎಂಥಾ ಅದ್ಭುತ ಬ್ಯಾಟ್ರೀ ಆಗಿತ್ತು ಆ ಬೇಡತಿಯ ಕಣ್ಣು ?
ಹೋಗಲಿ ನಮ್ಮ ಪ್ರಾಚೀನಾನ್ವೇಷಿಗಳು …. ಅರಣ್ಯವನ್ನು ಅಗಾಧವಾಗಿ ಪ್ರೀತಿಸಿ….. “ಬೃಹದಾರಣ್ಯಕೋಪನಿಷತ್ತು” ನಿರ್ಮಿಸಲಿಲ್ಲವೇ ? ಅಹಾ…..ಅರಣ್ಯದ ಬೃಹತ್ತು ಎಂಥಾ ಮಹತ್ತು !!
ರಾಜ ಮಹಾರಾಜರು ಕೂಡ ಈ ಕಾಡಿನ ಸಂಚಾರಿ ಯೋಗಿಗಳಿಗೆ ಕಾಲಿಗೆರಗುತ್ತಿದ್ದರು. ಸ್ವಯಂ ರಾಜಕುಮಾರನಾಗಿದ್ದ ಗೌತಮನೇ ಬಯಲ ಬಿಕ್ಕುವಾಗಿ ಬುದ್ದನಾದ !
ಈಗೇನಾಯಿತು ನೋಡಿ ! ಮಹಾಯೋಗಿಗಳನ್ನು ಮಹಾಜ್ಞಾನಿಗಳನ್ನು ಚೂರು ಹತ್ತಿರದಲ್ಲಿ ಹೋಗಿ ನೋಡಿರಿ. ಅವರ ಸುತ್ತಮುತ್ತ ಒಂದು ಪುಡಿಕಾಸು ಪುಂಡೀಪಲ್ಲೆ ಬಡವರ ಕೂಸು ಬರಲಾರದು. ಯಾರಾದರೂ ಬಡಬಗ್ಗರು ಬಂದುದಾದರೆ ಅದು ಪತ್ರಿಕೆಗಳಿಗೆ ಪೋಜು ಕೊಡಲು ಮಾತ್ರ ! ಅರೆಗಂಜಿ ಅರೆಹೊಟ್ಟೆಯ ಮಹಾಯೋಗಿಗಳು ಈಗ ಅಬ್ಜಾಧೀಶ್ವರರಾಗಿಬಿಟ್ಟರು. ಯಾವದೇ ಮಠದ ಇತಿಹಾಸ ನೋಡಿರಿ…. ಆ ಮಠದ ಮೂಲಪುರಷ ….ಭಿಕ್ಷುಕನಾಗಿ…. ಕಾಡಿನಲ್ಲಿ ಹುತ್ತದ ಮಧ್ಯ ತಪಸ್ಸು ಮಾಡಿದವ. ಈಗ ಅದೇ ಸಂಚಾರಿ ಆದಿ ಭಿಕ್ಷುಕ ಯೋಗಿಯ ಪರಮ ಶಿಷ್ಯರು ಬಂಗಾರ ತಗಡಿನ ಸಿಂಹಾಸನದ ಮೇಲೆ ಕೂಡುವ ಸಿಂಗಾರಸೌಭಾಗ್ಯ ಪಡೆದಿದ್ದಾರೆ !
ಏನ ಮಜಾ ಅಂತೀರಿ….ಅಂದಿಗೆ ನಾವು ಕೊಟ್ಟ ಇಂದಿನ ಉತ್ತರ ಏನು?
ಅಬ್ಬಬ್ಬಾ…. ಜನದಟ್ಟಣೆಗೆ ಅಂಜಿ ಆ ತಿರುಪತಿ ತಿಮ್ಮಪ್ಪ ತಿರುಮಲ್ಲೇಶ್ವರ ಬೆಟ್ಟದ ತುಟ್ಟತುದಿಗೆ ಓಡಿ ಹೋದರೂ ಅವನಿಗೆ ಕೋಟಿಕೋಟಿ ಭಾರದ ಕಿರೀಟ ಹೊರುವ ಕಸರತ್ತು ತಪ್ಪಲೇ ಇಲ್ಲಾ ! “ಕಾರಿಯ ಸೊಪ್ಪಾದರೂ ಕಾಯಕದಿಂದ ಬಂದುದು ಶಿವಾರ್ಪಿತ”…..ಎಂದ ಶರಣರ ಈ ನಾಡಿನಲ್ಲಿಯೇ ಹೀಗೆ ! “ಓ….ತಿಮ್ಮಪ್ಪಾ….. ನಮ್ಮಪ್ಪಾ….. ನಿನಗೇಕೆ ಈ ಟನ್ನುಗಟ್ಟಲೆ ಚಿನ್ನ-ವಜ್ರದ ಭಾರವಪ್ಪಾ ? ಆ ವಜ್ರಕೋಟಿ ನಮ್ಮ ಹಸಿದ ಹೊಟ್ಟೆಯ ಕಂದಮ್ಮಗಳಿಗೆ ಕೊಡಬಾರದೇನಪ್ಪಾ ? ಹುಂಡಿ ತುಂಬಿಸುವ ಬದಲು ಸ್ಕೂಲು ಹುಡುಗರ ಮಧ್ಯಾನದ ಅನ್ನದ ಬಂಡಿ ತುಂಬಿಸಿದರೆ ಹೆಂಗಪ್ಪಾ ?
ಅಬ್ಬಬ್ಬಾ….. ದಮಡಿ ಹೋತು ಡಾಲರ್ ಬಂತು ! ಪೈಸೆ ಹೋತು ಪೌಂಡು ಬಂತು !
ಯಾರು ಮಣ್ಣನ್ನು ಅಪ್ಪಿತಪ್ಪಿಯೂ ಮುಟ್ಟುವದಿಲ್ಲವೋ ಅವರೇ …. ಇಂದು ಹೈಫೈಗಳು !
ಹಾಂ…..ಇನ್ನೇನು ದೂರವಿಲ್ಲ….. ನಿಮ್ಮ ಮನೆಗೇ ಬರುತ್ತಿದ್ದಾಳೆ ರೋಬೊ ಸೊಸೆ ! ಈಗಿನ ಖಚಡಾ-ಯಬರೇಸಿ- ಅವ್ಡುಜವ್ಡು- ಸೊಸೆಯರಿಗಿಂತ ಬರಲಿರುವ “ರೋಬೊ ರಮಣಿ” ಹ್ಯಾಂಗಿರಲಿಕ್ಕಿಲ್ಲ !
ಏನೇ ಅನ್ರಿ….. ಈ ಜೀವ ಹಿಂಡುತಿಯಾದ ಹೆಂಡತಿಗಿಂತ ನೂತನ ರೋಬೊ ಪ್ರಿಯತಮೆ ಮೇಲಲ್ಲವೇ ? ಅವಳು ಒಂದು ದುಡ್ಡು ಸಂಬಳ ಪಡೆಯದೇ ೨೪ ಗಂಟೆಯೂ ದುಡಿಯುತ್ತಾಳೆ !
ಕಾಲಕ್ಕೆ ವಂದನೆ. ಕಾಲದ ಕಾಲಕಾಲೇಶನಿಗೆ ವಂದನೆ.
ನಿನ್ನೆ ನಿನ್ನದು ! ಇಂದು ನನ್ನದು ! ನಾಳೆ ಯಾರದು ?

(ಲೇಖಕರು – ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ : ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ :
ಬೆಂಗಳೂರ- ೫೬೦೦೮೩ / ದೂ-೯೯೪೫೭ ೦೧೧೦೮)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button