ಮಾಧ್ಯಮಗಳಿಗೆ ಮನಃಶಾಸ್ತ್ರಜ್ಞರ ಮನವಿ

 ಕೋವಿಡ್‌ನಲ್ಲಿ ಸಾವೊಂದೇ ಸತ್ಯವಲ್ಲ

 

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮುಂಚೂಣಿ ಮಾಧ್ಯಮಗಳು ಋಣಾತ್ಮಕ ಅಂಶಗಳನ್ನೇ ವೈಭವೀಕರಿಸುತ್ತಿರುವದನ್ನು ಕಡಿಮೆ ಮಾಡಿ ಸಮಾಜದಲ್ಲಿ ಭೀತಿ ಹುಟ್ಟಿಸುವದನ್ನು ನಿಲ್ಲಿಸುವಂತೆ ಬೆಂಗಳೂರಿನ ನಿಮ್ಹಾನ್ಸ್ ಮನೋಶಾಸ್ತ್ರಜ್ಞರು ಮನವಿ ಮಾಡಿದ್ದಾರೆ.

ಈ ಕುರಿತು ನಿಮ್ಹಾನ್ಸ್‌ನ ಮನೋವೈದ್ಯ ಡಾ. ಸುರೇಶ ಬಾಡಮಠ ಅವರು ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದು ವೈರಲ್ ಆಗಿದೆ.

ಸಂದೇಶದಲ್ಲಿ ಏನಿದೆ ?

ಪ್ರೊ. ಬಿ. ಎನ್. ಗಂಗಾಧರ ವಿಶ್ರಾಂತ ನಿರ್ದೇಶಕ ನಿಮ್ಹಾನ್ಸ್, ನಿಮ್ಹಾನ್ಸ್‌ನ ಮನೋರೋಗ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರತಿಮಾಮೂರ್ತಿ, ಭಾರತೀಯ ಮನಶಾಸ್ತ್ರಜ್ಞರ ಸಂಘಟನೆಯ ಅಧ್ಯಕ್ಷ ಡಾ. ಗೌತಮ್ ಸಹಾ, ದೆಹಲಿಯ ಏಮ್ಸ್ ಆಸ್ಪತ್ರೆಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಜೇಶ ಸಾಗರ್ ಅವರು ಮಾಧ್ಯಮಗಳಿಗೆ ಜಂಟಿಯಾಗಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ, ಸತ್ಯವನ್ನೇ ವರದಿಮಾಡಬೇಕಾಗಿರುವುದು ಮಾಧ್ಯಮಗಳ ಹೊಣೆಗಾರಿಕೆ ನಿಜ. ಆದರೆ ಪ್ರಸ್ತುತ ಸಂದರ್ಭದಲ್ಲಿ ಮಹುತೇಕ ಮುಂಚೂಣಿ ಮಾಧ್ಯಮಗಳು ಕೋವಿಡ್ ಕುರಿತಾಗಿ ಋಣಾತ್ಮಕ ಅಂಶಗಳನ್ನು ಮಾತ್ರ ವರದಿ ಮಾಡುತ್ತಿವೆ. ಕೋವಿಡ್ ಸಾವು, ಅಂತ್ಯ ಸಂಸ್ಕಾರ, ಸಂತ್ರಸ್ತರು ಅಳುತ್ತಿರುವ ದೃಷ್ಯಗಳು ಮೇಲಿಂದ ಮೇಲೆ ಬಿತ್ತರವಾಗುತ್ತಿವೆ.

ಮಾಧ್ಯಮಗಳಿಗೆ ಅಪರಿಮಿತ ಶಕ್ತಿಯಿದೆ. ಈ ಶಕ್ತಿ ಹೊಣೆಗಾರಿಕೆಯಿಂದ ಕೂಡಿದೆ. ಹಾಗಾಗಿ ಮಾಧ್ಯಮಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಸುದ್ದಿಗಳನ್ನೇ ಪ್ರಸಾರ ಮಾಡುವುದು ತರವಲ್ಲ. ಇದರಿಂದಾಗಿ ಸಹಜವಾದ ಶೀತ ಇದ್ದವರೂ ಸಹ ಕೊವಿಡ್ ಭಯದಿಂದ ಆಸ್ಪತ್ರೆಗಳಿಗೆ ಓಡುವಂತಾಗಿದೆ. ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗುತ್ತಿದ್ದು ನೈಜವಾಗಿ ಕೊವಿಡ್ ಸೋಂಕಿತರ ಚಿಕಿತ್ಸೆಗೂ ತೊಂದರೆಯಾಗುತ್ತದೆ.

ಕೋವಿಡ್ ಸೋಂಕಿತರಲ್ಲೂ ಸಹ ಎಲ್ಲರಿಗೂ ಆಮ್ಲಜನಕ, ವೆಂಟಿಲೇಟರ್‌ನ ಅಗತ್ಯವಿರುವುದಿಲ್ಲ. ಶೇ. ೯೦ರಷ್ಟು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇನ್ನುಳಿದ ಶೇ. ೧೦ರಷ್ಟು ಸೋಂಕಿತರಲ್ಲಿ ಕೇವಲ ಶೇ. ೨-೩ ರಷ್ಟು ಜನರಿಗೆ ಮಾತ್ರ ಆಕ್ಸಿಜನ್ ಅಗತ್ಯವಿರುತ್ತದೆ. ಹಾಗಾಗಿ ಈ ಸತ್ಯವನ್ನೂ ಸಹ ಮಾಧ್ಯಮಗಳು ಮೇಲಿಂದ ಮೇಲೆ ಬಿತ್ತರಗೊಳಿಸಿದರೆ ಸಮಾಜದಲ್ಲಿ ಕೋವಿಡ್ ಬಗ್ಗೆ ಉಂಟಾಗಿರುವ ಅನಗತ್ಯ ಭೀತಿ ಶಮನವಾಗಲು ಸಾಧ್ಯ ಎಂದು ಹಿರಿಯ ಮನಶಾಸ್ತ್ರಜ್ಞರು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಡಾ. ಸುರೇಶ ಹೇಳಿದ್ದಾರೆ.

ಕೊವಿಡ್‌ನಿಂದ ಜನ ಅನಗತ್ಯ ಭಯಕ್ಕೆ ಒಳಗಾಗಿರುವ ಬಗ್ಗೆ ಉದಾರಣೆ ಸಮೇತ ವಿವರಿಸಿರುವ ಅವರು, ಪತ್ರಕರ್ತರಾಗಿರುವ ನನ್ನದೇ ಸ್ನೇಹಿತರೊಬ್ಬರು ತಮ್ಮ ತಂದೆಗೆ ಸೋಂಕು ತಗುಲಿದ್ದಕ್ಕಾಗಿ ಚಿಂತಿತರಾಗಿದ್ದರು. ಸ್ನೇಹಿತನ ತಂದೆಯ ಆಮ್ಲಜನಕ ಪ್ರಮಾಣ ೯೭ ಇದ್ದರೂ ಸಹ ತಮ್ಮ ಪ್ರಭಾವ ಬಳಸಿ ಆಕ್ಸಿಜನ್ ಬೆಡ್ ಪಡೆದರು.  ಮುಂಜಾಗೃತಾ ಕ್ರಮವಾಗಿ ಎರಡು ಬೆಡ್‌ಗಳನ್ನು ಕಾಯ್ದಿರಿಸಿದ್ದರು. ಇದನ್ನು ಪ್ರಶ್ನಿಸಲಾಗಿ ನೀವು ಮಾಧ್ಯಮಗಳಲ್ಲಿ ಕೋವಿಡ್ ಉಲ್ಬಣಗೊಂಡ ವರದಿಗಳನ್ನು ನೋಡುತ್ತಿಲ್ಲವೇ ಎಂದು ಮರು ಪ್ರಶ್ನಿಸಿದರು. ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದರು. ಓರ್ವ ಪತ್ರಕರ್ತರೇ ಇಷ್ಟು ಚಿಂತೆಗೀಡಾದರೆ ಜನಸಾಮಾನ್ಯರ ಪಾಡೇನು ? ಈ ರೀತಿ ಮಾಡುವುದರಿಂದ ಅಗತ್ಯವಿರುವವರಿಗೆ ಬೆಡ್, ಆಕ್ಸಿಜನ್ ಸಿಗಲು ಹೇಗೆ ಸಾಧ್ಯ ಎಂದು ಡಾ. ಸುರೇಶ ಪ್ರಶ್ನಿಸಿದ್ದಾರೆ.

ಪತ್ರಕರ್ತರು ನೈಜ ವರದಿಗಳನ್ನೇ ಮಾಡಬೇಕಿರುವುದು ಪತ್ರಿಕಾಧರ್ಮ, ಆದರೆ ಒಟ್ಟಾರೆ ಸೋಂಕಿತರಲ್ಲಿ ಶೇ. ಎಷ್ಟು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿದೆ, ಎಷ್ಟು ಜನರಿಗೆ ಆಕ್ಸಿಜನ್ , ವೆಂಟಿಲೇಟರ್‌ನ ಅಗತ್ಯವಿದೆ ಎಂಬ ಸತ್ಯವನ್ನೂ ಮೇಲಿಂದ ಮೇಲೆ ಪ್ರಸಾರ ಮಾಡಿದರೆ ಜನಸಾಮಾನ್ಯರು ಮನೋಬಲ ಹೊಂದುತ್ತಾರೆ. ಇದರಿಂದ ಕೋವಿಡ್ ಸೋಂಕನ್ನು ಆದಷ್ಟು ಶೀಘ್ರದಲ್ಲಿ ಕಡಿಮೆ ಮಾಡಲು ಸಾಧ್ಯ ಎಂದು ಅವರು ಕೋರಿದ್ದಾರೆ.

 

ಕೋವಿಡ್ ಕೇರ್ ಸೆಂಟರ್ ದಾಖಲಾಗಲು ವರದಿ ಕಡ್ಡಾಯವಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button