Kannada NewsKarnataka NewsLatest

ಪಶ್ಚಿಮಬಂಗಾಳ ಹಿಂಸಾಚಾರ: ವಿಶ್ವಹಿಂದೂಪರಿಷತ್, ಬಜರಂಗದಳ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಪೂರ್ವ ಮತ್ತು ಚುನಾವಣೆ ಫಲಿತಾಂಶ ಬಂದ ನಂತರ  ಮಮತಾ ಬ್ಯಾನರ್ಜಿ ಸರ್ಕಾರ ಹಿಂದುಗಳ ಅಂಗಡಿ, ಮನೆ ಲೂಟಿ ,ಹಿಂದುಗಳ ಕಗ್ಗೊಲೆ, ಮಹಿಳೆಯರ ಮೇಲೆ ಅತ್ಯಾಚಾರ, ಸುಮಾರು 120ಕ್ಕೂ ಹೆಚ್ಚು ಅಮಾಯಕರ ಹತ್ಯೆ ನಡೆಸಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಬೆಳಗಾವಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು ಮತ್ತು  ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.

     ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮುಸ್ಲಿಮ ತುಷ್ಟೀಕರಣ ನೀತಿ ಇಡೀ ದೇಶವೇ ತಲೆ ತಗ್ಗಿಸುವಂತೆ ಆಗಿದೆ. ಈಗಾಗಲೇ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಿದೆ, ಆಗುತ್ತಲೇ ಇದೆ. ಜಾತ್ಯಾತೀತ ಎಂದು ಬೊಗಳೆ ಕೊಚ್ಚಿಕೊಳ್ಳುವ ಬುದ್ಧಿಜೀವಿಗಳಿಗೆ, ರಾಜಕಾರಣಿಗಳಿಗೆ  ಇಷ್ಟೆಲ್ಲ ದೇಶ ವಿರೋಧಿ ಕೃತ್ಯ, ಬಂಗಾಳದಲ್ಲ್ಲಿ ಹಿಂದುಳಿದ  ಬಡ ಕುಟುಂಬದವರ ಮನೆ, ಅಂಗಡಿ ಉದ್ವಸ್ತಗೊಳಸಿ ಅಂಗಡಿ ದೊಂಬಿ, ಲೂಟಿ, ಮಾಡಿ ಮತ್ತೊಂದು ಕಾಶ್ಮೀರ, ಬಾಂಗ್ಲಾದೇಶ ಮಾಡ ಹೊರಟರೂ ಕಣ್ಣು ಕಾಣುವದಿಲ್ಲವೆ. ಮುಸ್ಲಿಮರು ಏನೇ ತಪ್ಪು ಮಾಡಿದರೂ ಓಟಿನ ಆಸೆಗಾಗಿ ಹಿಂದುಗಳ ಕೊಲೆ ಬೆದರಿಕೆಗಳಿಂದ ಬಂಗಾಳ ಕಾಲಿ ಮಾಡಿದರೂ ಪರವಾಗಿಲ್ಲ. ನಾವು ಮಾತ್ರ ಆರಿಸಿ ಬರಬೇಕೆಂದು ಪ್ರಜಾಪ್ರಭುತ್ವವನ್ನೆ ಅಣುಕಿಸುವ ಮಮತಾ ಸರಕಾರದಿಂದ ಅಮಾಯಕರ ಜೀವ ರಕ್ಷಣೆ ಆಗಬೇಕು. ಅವರಿಗೆ ನ್ಯಾಯಯುತ ಪರಿಹಾರ ಸಿಗಬೇಕು. ಕಾನೂನುನಾತ್ಮಕ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ವಿಶ್ವ ಹಿಂದು ಪರಿಷತ್ ಬಜರಂಗದಳದ ಸ್ಪಷ್ಟ ನಿಲುವು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರೋನಾ ಮುಗಿದ ನಂತರ ದೇಶವ್ಯಾಪಿಯಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳ ಬಂಗಾಳದಲ್ಲ್ಲಿ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡಬೇಕಾಗಬಹುದು ಎಂದು ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಕೊಡಲು ಬಯಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್   ಎಚ್ಚರಿಸಿದರು.
 ಈ ಸಂದರ್ಭದಲ್ಲಿ ಶ್ರೀಕಾಂತ ಕದಮ್  ಜಿಲ್ಲಾ ಅಧ್ಯಕ್ಷರು, ಅಚ್ಯುತ ಕುಲಕರ್ಣಿ ವಿಭಾಗ ಸಹ ಸೆಕ್ರೆಟರಿ, ವಿಜಯ ಜಾಧವ ಜಿಲ್ಲಾ ಕಾರ್ಯದರ್ಶಿ, ಹೇಮಂತ ಹವಳ ನಗರ ಕಾರ್ಯದರ್ಶಿ, ರವಿ ಕಲಘಟಗಿ ಮುಂತಾದವರು ಇದ್ದರು.

ಮನವಿಯಲ್ಲಿ ಏನಿದೆ?

ಭಾರತವು ಪ್ರಜಾಪ್ರಭುತ್ವವನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ. ಇಲ್ಲಿ ಚುನಾವಣೆಗಳು ಹಬ್ಬದ ರೀತಿಯಲ್ಲಿರುತ್ತವೆ. ಇಂತಹ ವ್ಯವಸ್ಥೆಯನ್ನು ಹಾಳುಗೆಡವಲು ವಿಚ್ಚಿದ್ರಕಾರಿ ಶಕ್ತಿಗಳು ಪ್ರಯತ್ನಿಸುತ್ತಾ ಜನರ ಮನದಲ್ಲಿ ಭಯ, ಆತಂಕಗಳನ್ನು ಸೃಷ್ಟಿ ಮಾಡಿ, ಅಪಾರ ಆಸ್ತಿಪಾಸ್ತಿಗಳನ್ನು ಹಾಳುಮಾಡಿ, ಅತ್ಯಾಚಾರ ಮಾಡಿ, ಕೊಲೆಗಳನ್ನು ಮಾಡಿ ಅರಾಜಕತೆಯನ್ನು ಸೃಷ್ಟಿ ಮಾಡುತ್ತಿವೆ. ಇದಕ್ಕೆ ಉದಾಹರಣೆಯಾಗಿ ಪಶ್ಚಿಮ ಬಂಗಾಲದಲ್ಲಿ ನಡೆದ ಅಹಿತಕರ ಘಟನೆಗಳು ತಲೆ ತಗ್ಗಿಸುವಂತಿವೆ. ಈ ರಾಜ್ಯದ ಮುಖ್ಯ ಮಂತ್ರಿಗಳಾಗಿರುವ  ಮಮತಾ ಬ್ಯಾನರ್ಜಿ  ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಚುನಾವಣಾ ಪೂರ್ವದಲ್ಲೇ ಒಂದು ನಿರ್ಧಿಷ್ಟ ಸಮುದಾಯಕ್ಕೆ ಹಾಕುತ್ತಿದ್ದ ಬೆದರಿಕೆಗಳು ಮತ್ತು ದೇಶದ್ರೋಹಿ ಜೆಹಾದೀ ಶಕ್ತಿಗಳೊಂದಿಗೆ ಚುನಾವಣಾ ಪ್ರಚಾರದ ವೇಳೆಯಲ್ಲೇ ನಡೆಯುತ್ತಿದ್ದ ಗಲಭೆಗಳು ಮತ್ತು ಫಲಿತಾಂಶದ ನಂತರ ವಿಚ್ಚಿದ್ರಕಾರಿ ಶಕ್ತಿಗಳು ಮುಖ್ಯಮಂತ್ರಿಗಳಿಂದ ಪ್ರೇರಿತರಾಗಿ ಅವರ ಸೂಚನೆಗಳನ್ನು ಪಡೆದು, ಚುನಾವಣೆಗಳಲ್ಲಿ ಆದ ಹಿನ್ನೆಡೆಗೆ ಪ್ರತೀಕಾರವಾಗಿ, ಹತಾಶೆಯಿಂದ ಪೂರ್ವಸಿದ್ಧತೆಯೊಂದಿಗೆ ಹಿಂಸಾಚಾರ, ಗಲಭೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಮಾರಣಹೋಮ, ದೇವಸ್ಥಾನಗಳ ಮೇಲೆ ದಾಳಿ, ಅಂಗಡಿ ಮುಂಗಟ್ಟುಗಳ ಲೂಟಿ ಮತ್ತು ಅವುಗಳಿಗೆ ಬೆಂಕಿ ಹಚ್ಚಿ ವಿಕೃತವಾಗಿ ಸೇಡನ್ನು ತೀರಿಸಿಕೊಂಡು ಯಾವುದೇ ಭಯವಿಲ್ಲದೆ ಮೆರೆಯುತ್ತಿದ್ದಾರೆ. ಸಾವಿರಾರು ಜನ ಈ ಹಿಂಸಾಚಾರಗಳಿಗೆ ಬಲಿಯಾಗಿ ನಿರ್ವಸಿತರಾಗಿ, ನಿರ್ಗತಿಕರಾಗಿ, ತಮ್ಮ ಬಂಧುಗಳನ್ನು ಕಳೆದುಕೊಂಡು ರಕ್ಷಣೆಗಾಗಿ ಸುರಕ್ಷಿತ ತಾಣಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ.  ವಿಶೇಷವಾಗಿ ಹಿಂದೂ ಸಮಾಜದ ಅಂಗವಾಗಿರುವ, ಅತಿದೊಡ್ಡ ಸಮುದಾಯವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಮಾಡಿರುವ ಈ ಕೃತ್ಯಗಳನ್ನು ಇಡೀ ರಾಷ್ಟ್ರವು ಖಂಡಿಸುತ್ತದೆ.
ದೌರ್ಭಾಗ್ಯವಶಾತ್, ಇದನ್ನೆಲ್ಲಾ ತಡೆಯಬೇಕಿದ್ದ ಪಶ್ಚಿಮ ಬಂಗಾಳದ  ಆಡಳಿತಾರೂಢ ಸರ್ಕಾರವು ಮೌನವಾಗಿರುವುದಲ್ಲದೆ, ಹಿಂಸೆಗಳನ್ನು ಮತ್ತು ಅನಾಹುತಗಳನ್ನು ತಡೆಯುವ ಯಾವುದೇ ಪ್ರಯತ್ನ ಮಾಡಿಲ್ಲ, ಬದಲಿಗೆ ಕೆಲವು ಸ್ಥಳಗಳಲ್ಲಿ ತಾನೇ ಈ ಗಲಭೆಗಳಿಗೆ ಪ್ರಚೋದನೆ ನೀಡಿದಂತೆ ಕಾಣಬರುತ್ತಿದೆ. ಇದನ್ನು ಗಮನಿಸಿದರೆ ಆಡಳಿತಾರೂಢ ಸರ್ಕಾರವು ತನ್ನದೇ ಪಕ್ಷದ ಕೆಲವು ವಿಚ್ಚಿದ್ರಕಾರಿಶಕ್ತಿಗಳ, ದೇಶದ್ರೋಹಿಗಳ ಮತ್ತು ಜೆಹಾದಿಗಳ ಕಪಿಮುಷ್ಟಿಗೆ ಸಿಲುಕಿ ಅವರ ಕೈಗೊಂಬೆಯಾಗಿ ವರ್ತಿಸುತ್ತಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ತೃಣಮೂಲ ಕಾಂಗ್ರೆಸ್ಸಿನ ಕಳೆದ ಎರಡು ಅವಧಿಗಳ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದ್ದು ಹಿಂದೂ ಸಮಾಜ ಅತ್ಯಂತ ಅಸುರಕ್ಷಿತವಾಗಿದೆ. ಈಗಲೂ ಸಹ ಸೂಕ್ತರಕ್ಷಣೆ ಸಿಗದೇ ಹೋದಲ್ಲಿ ಮುಂದಿನ ಐದು ವರ್ಷಗಳಲ್ಲಿ ಇಡೀ ಹಿಂದೂ ಸಮಾಜ ಅಲ್ಲಿಂದ ವಲಸೆ ಹೋಗಬೇಕಾಗಬಹುದು ಅಥವಾ ಅದೇ ಸಮಾಜವು ಅಲ್ಲಿ ಸ್ಥಿರವಾಗಿ ನಿಲ್ಲಲು ಮತ್ತು ಆತ್ಮರಕ್ಷಣೆಗಾಗಿ ಕೆಲವು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಈ ಸಂಗತಿಗಳು ರಾಷ್ಟ್ರದ ಸಮಗ್ರತೆಗೆ ಧಕ್ಕೆಯನ್ನು ತರುವಂತಿದ್ದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ. ಇಡೀ ದೇಶವು ಆತಂಕದಿಂದ ಈ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.
ಚುನಾವಣೋತ್ತರದಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದಿರುವ ಈ ಎಲ್ಲಾ ಘಟನೆಗಳು ತಮ್ಮಂತಹ ಸೂಕ್ಷ್ಮಮತಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವುದಿಲ್ಲ, ಅಲ್ಲಿನ ಪೂರ್ಣ ವಿಚಾರಗಳು ತಮ್ಮ ಕಿವಿಗಳಿಗೆ ಬೀಳದಿರಲು  ಸಾಧ್ಯವಿಲ್ಲ ಮತ್ತು ತಾವು ಇದನ್ನು ಸಹಿಸಿಕೊಂಡಿರುವುದಿಲ್ಲ ಎಂಬ ನಂಬಿಕೆ ನಮ್ಮದು. ತಾವು ನಮ್ಮ ಸಂವಿಧಾನದಲ್ಲಿರುವ ಅಧಿಕಾರಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಸಂಬಂಧಪಟ್ತ ಅಧಿಕಾರ ಯಂತ್ರಕ್ಕೆ ಕಾನೂನು ಪಾಲನೆ ಮಾಡಲು ಸ್ಪಷ್ಟ ಸೂಚನೆ, ಆದೇಶ ಮತ್ತು ಅಧಿಕಾರಗಳನ್ನು ನೀಡಿ ಶಾಂತಿಯನ್ನು ಕಾಪಾಡಿ, ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರುವಂತೆ ವಿನಂತಿಸುವುದರೊಂದಿಗೆ ಬಂಗಾಲದಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡಿ, ಕಾನೂನಿನ ಚೌಕಟ್ಟಿನಲ್ಲಿ ಸುರಕ್ಷತೆಯಿಂದ ಸಹಜವಾಗಿ, ನೆಮ್ಮದಿಯಿಂದ ಬದುಕುವ ಭರವಸೆಯ ವಾತಾವರಣವನ್ನು ನಿರ್ಮಿಸುವಂತೆ ವಿನಂತಿಸುತ್ತೇವೆ.
ಹಾಗೆಯೇ, ಈ ಗಲಭೆ ಹಿಂಸಾಚಾರ, ಹತ್ಯೆಗಳಿಗೆ ಕಾರಣರಾಗಿರುವ ದೇಶದ್ರೋಹಿಗಳನ್ನು, ಜೆಹಾದಿಗಳನ್ನು ಮತ್ತು ತಪ್ಪಿತಸ್ಥರನ್ನು ಯಾವುದೇ ಕನಿಕರ ತೋರಿಸದೆ ಅತ್ಯಂತ ಕಠಿಣವಾಗಿ ಶಿಕ್ಷಿಸುವ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇನ್ನೆಂದೂ, ಇನ್ನೆಲ್ಲೂ ಇಂತಹ ಅಹಿತಕರ ಘಟನೆಗಳು ಮರುಕಳಿಸದಿರುವಂತೆ ವ್ಯವಸ್ಥೆ ಮಾಡಬೇಕೆಂದು ಮತ್ತು ಈ ಹಿಂಸಾಚಾರದಲ್ಲಿ ಬಲಿಪಶುಗಳಾಗಿರುವ ಅಮಾಯಕರಿಗೆ ಸೂಕ್ತ ನ್ಯಾಯ ಮತ್ತು ಪರಿಹಾರಗಳನ್ನು ನೀಡಿ ರಕ್ಷಿಸುವಂತೆ ತಮ್ಮಲ್ಲಿ ವಿನಂತಿ ಮಾಡುತ್ತೇವೆ.
                                                        
ಕೆ.ಗೋವದ೯ನ ರಾವ್‌
ಪ್ರಾಂತ ಕಾರ್ಯದರ್ಶಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button