Kannada NewsKarnataka NewsLatest

ಚರಂಡಿಯಲ್ಲಿ ಮುಳುಗಿದ ಮಗುವಿನ ಕಾಲು ಕಂಡು ಮೇಲೆತ್ತಿದ ತಾಯಿ

 

ಪ್ರಗತಿವಾಹಿನಿ ಸುದ್ದಿ,  ಮುಗಳಖೋಡ:  ಚರಂಡಿಯಲ್ಲಿ ಮುಳುಗಿದ 3 ವರ್ಷದ ಮಗು ಕ್ಷಣಾರ್ಧದಲ್ಲಿ ಅದೃಷ್ಟವಶಾತ್  ಸಾವಿನ ದವಡೆಯಿಂದ ಪಾರಾಗಿದೆ.

 ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ ಸಂಭವಿಸಿದ ಕರುಳು ಹಿಂಡುವ ಧಾರುಣ ಘಟನೆ. 2016ರಿಂದ ಇಲ್ಲಿಯವರೆಗೆ ಅಂದರೆ 5 ವರ್ಷಗಳ ಕಾಲ ಮುಗಳಖೋಡ ಪುರಸಭೆಯ ವಾರ್ಡ್ ಸಂಖ್ಯೆ 6ರಲ್ಲಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಗ್ರಾಮ ಪಂತಾಯತ್ ಅವಧಿಯಲ್ಲಿ ಕಳಪೆ ಮಟ್ಟದಲ್ಲಿ ಕಡಿಮೆ ಗಾತ್ರದ ಚರಂಡಿ ನಿರ್ಮಾಣ ಮಾಡಿರುವುದರಿಂದ ಕೊಳಚಯ ನೀರು ರಸ್ತೆಯ ಮೇಲೆ ಮತ್ತು ಸ್ಥಳೀಯರ ಮನೆಗಳಿಗೆ ನುಗ್ಗುತ್ತಿತ್ತು. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.
ಸೋಮವಾರ 6ನೇ ವಾರ್ಡ್ ನಿವಾಸಿ ಭಾರತಿ ಹಣಮಂತ ಕೆಳಗಡೆ ಎಂಬುವವರ 3ವರ್ಷದ ಮಗಳು ನೀಲಾಂಬರಿ ಆಟವಾಡಲೆಂದು ಮನೆಯ ಹೊರಗಡೆ ಬಂದಿದ್ದಾಳೆ. ಚರಂಡಿ ನೀರು ತುಂಬಿ ರಸ್ತೆಯ ಮೇಲೆಲ್ಲಾ ಹರಿಯುತ್ತಿತ್ತು. ರಸ್ತೆ ಯಾವುದು ಚರಂಡಿ ಯಾವುದು ಎಂದು ಕಾಣದೆ ಚರಂಡಿಗೆ ಉರುಳಿದ ಮಗುವಿನ ಕಾಲು ಮಾತ್ರ ಮೇಲೆ ಕಾಣುತಿತ್ತು. ಅಕಸ್ಮಾತ್ ಹೊರಗಡೆ ಬಂದ ಮಗುವಿನ ತಾಯಿ ಭಾರತಿ ಚರಂಡಿಯಲ್ಲಿ ಬಿದ್ದು ಜೀವನ್ಮರಣದ ಹೋರಾಟದಲ್ಲಿ ಓದ್ದಾಡುತಿದ್ದ ಮಗುವನ್ನು ಸ್ಥಳೀಯರ ಸಹಕಾರದಿಂದ ಚರಂಡಿಯಿಂದ ಮೇಲೆತ್ತಿದರು.  ಕಿವಿಯಲ್ಲಿ ಊದಿ, ಕೈ ಕಾಲನ್ನು ತಿಕ್ಕಿದಾಗ ಮಗುವಿನ ಜೀವ ಮರಳಿ ಬಂದಿದೆ.
ಸಾವಿನ ದವಡೆಯಿಂದ ಪಾರಾದ ತನ್ನ ಮಗಳನ್ನು ಟವೆಲ್ ಹಾಕಿಕೊಂಡು ಸ್ಥಳೀಯ ಮಹಿಳೆಯರ ಸಮೇತ ಪುರಸಭೆಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2ದಿನಗಳಲ್ಲಿ ಸಮಸ್ಯೆ ಬಗೆ ಹರಿಯದೇ ಹೋದಲ್ಲಿ ಖುದ್ದಾಗಿ ನಾವೇ ಚರಂಡಿಗೆ ಕಲ್ಲು ಹಾಕಿ ಮುಚ್ಚುತ್ತೇವೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
” ನನ್ನ ಮಕ್ಕಳು ಆಟವಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವುದು. ಇದು 2ನೇ ಬಾರಿ.
 ನಾನು ಹೊರಗಡೆ ಬಂದು ನೋಡದೆ ಹೋಗಿದ್ದರೆ ನನ್ನ ಮಗಳು ಶವವಾಗಿ ಹೋಗುತ್ತಿದ್ದಳು. ಪ್ರತಿನಿತ್ಯ ಚರಂಡಿ ನೀರು ಹೊಳೆಯ ಆಕಾರದಲ್ಲಿ ಹರಿದು ಬರುತ್ತದೆ. ಅದರಲ್ಲಿ ಸೂಜಿ, ಸಲಾಯಿನ್ ಸೇರಿದಂತೆ ಹಾನಿಕಾರಕ ವಸ್ತುಗಳು ಹರಿದು ಬರುತ್ತಲೇ ಇರುತ್ತವೆ. ನಮ್ಮ ಮಕ್ಕಳ ಪ್ರಾಣಕ್ಕೆ ಬೆಲೆನೇ ಇಲ್ವಾ” ಎಂದು ಭಾರತಿ ಹಣಮಂತ ಕೆಳಗಡೆ ಪ್ರಶ್ನಿಸುತ್ತಾರೆ.
 5ವರ್ಷದ ಹಿಂದೆ ಆಯ್ಕೆಯಾಗಿ ಹೋಗಿರುವ ಇಲ್ಲಿಯ 6ನೇ ವಾರ್ಡ್ ನ ಸದಸ್ಯ ಅಪ್ಪಿತಪ್ಪಿಯೂ ಇತ್ತ ಕಡೆ ಸುಳಿದಿಲ್ಲ. 6ನೇ ವಾರ್ಡ್ ಅಂದ್ರೆ ಅದು ವಾರಸ್ದಾರ ಇಲ್ಲದ ದೌರ್ಭಾಗ್ಯದ ಜನರ ವಾರ್ಡ್ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
” ಗ್ರಾಮ ಪಂಚಾಯಿತಿ ಅವಧಿಯಲ್ಲಿ ಆಗಿರುವ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಚರಂಡಿಗಳ ಅಗಲ ಮತ್ತು ಎತ್ತರ ಕಡಿಮೆಯಾಗಿದೆ. ಈ ಕುರಿತು ಟೆಂಡರ್ ಕರೆದಿದ್ದೆವು. ಆದರೆ ಗುತ್ತಿಗೆದಾರರು ಅನರ್ಹರಾಗಿದ್ದರು. ಈ ಕೂಡಲೆ ಸದರಿ ಕೆಲಸವನ್ನು ಅರ್ಹ ಗುತ್ತಿಗೆದಾರರಿಗೆ ನೀಡುವುದರೊಂದಿಗೆ ಚರಂಡಿ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಿ ಕೊಡುತ್ತೇವೆ. “
-ಮುಖ್ಯಾಧಿಕಾರಿ ಜಿ ಬಿ ಡಂಬಳ ಮುಗಳಖೋಡ ಪುರಸಭೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button