ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಸದಾಶಿವನಗರ ಗೆಸ್ಟ್ ಹೌಸ್ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ರಾಜಕೀಯವಾಗಿ ಏನುಬೇಕಾದರೂ ಮಾತನಾಡಿ, ಆದರೆ ಮನುಷ್ಯ ಮನುಷ್ಯನಿಗೆ ಬೆಲೆಕೊಡುವುದನ್ನು ಕಲಿಯಬೇಕು. ನಾವಾಡುವ ಮಾತಿನಿಂದ ಸಮಾಜಕ್ಕೆ ಏನು ಸಂದೇಶ ರವಾನೆಯಾಗುತ್ತೆ ಎಂಬ ಅರಿವಿರಬೇಕು ಎಂದು ಶಾಸಕ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಗೆಸ್ಟ್ ಹೌಸ್ ಅವರದೆಂದು ಹೇಳಿದ ಮೇಲೆ ಅಲ್ಲಿಗೆ ಮುಗಿಯಿತು. ಗೆಸ್ಟ್ ಹೌಸ್ ಖಾಲಿಮಾಡಿಕೊಡಿ ಎಂದು ಹೇಳಿದ್ದರೆ ತಕ್ಷಣ ಬಿಟ್ಟುಕೊಡುತ್ತಿದ್ದೆವು. ಆದರೆ ನನಗೆ ಆ ಬಗ್ಗೆ ಮಾಹಿತಿಯೇ ಇಲ್ಲ. ಆ ಗೆಸ್ಟ್ ಹೌಸ್ ಕಳೆದ 15 ವರ್ಷಗಳಿಂದ ಲಾಕ್ ಆಗಿತ್ತು. ಈಗ ಏಕಾಏಕಿ ಯಾರೂ ಇಲ್ಲದಿರುವಾಗ ಬೀಗ ಮುರಿದು ಅವರೇ ದಾಂದಲೆ ನಡೆಸಿ, ಬಳಿಕ ಅವರೇ ಲಾಕ್ ಮಾಡಿಕೊಂಡು ಹೋಗಿದ್ದಾರೆ. ಮನೆ ಖಾಲಿ ಇದ್ದದ್ದರಿದ ನನ್ನ ಸುತ್ತಮುತ್ತ ಕೆಲಸ ಮಾಡೋ ಹುಡುಗರು ಅಲ್ಲಿ ವಾಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಎಲ್ಲಾ ಊರಿಗೆ ಹೋಗಿದ್ದರಿಂದ ಬೀಗ ಹಾಕಲಾಗಿತ್ತು. ಮನೆಯಲ್ಲಿ ಕೆಲ ಶೂಟಿಂಗ್ ಮೆಟೀರಿಯಲ್ಸ್ ಇದ್ದವು. ಆದರೆ ನಿನ್ನೆ ಅವರೇ ಬೀಗ ಒಡೆದು ಎಲ್ಲಾ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ನಮ್ಮ ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆಯಾಗಿದೆ ಅಂತಹ ರಂಪಾಟ ನಡೆದಿಲ್ಲ ಎಂದರು.
ಒಂದು ಸಮಯದಲ್ಲಿ ನಮ್ಮ ನಾಯಕರ ಜೊತೆ ಆತ್ಮೀಯವಾಗಿ ಇದ್ದವರು, ರಾಜಕೀಯವಾಗಿ ಅವರು ಬೆಳೆಯಲು ನಮ್ಮ ನಾಯಕರ ಕೊಡುಗೆ ಇದೆ. ಓರ್ವ ಜನಪ್ರತಿನಿಧಿಯಾಗಿ ತೂಕವಾಗಿ ಮಾತನಾಡಬೇಕು. ಮಾಧ್ಯಮಗಳಲ್ಲಿ ಜಮೀರ್ ಅಹ್ಮದ್ ಆಡಿದ ಮಾತುಗಳನ್ನು ನೋಡಿದರೆ ಅವರ ಸಂಸ್ಕೃತಿ ಏನೆಂಬುದು ಅರ್ಥವಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಳೆ ನಡೆಯಬೇಕಿದ್ದ ಪಾಲಿಕೆ ಚುನಾವಣೆಗೆ ತಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ