Latest

ಚುನಾವಣೆಯಲ್ಲಿ ಸೋತರೂ ಜನರ ಸಹಕಾರಕ್ಕೆ ನಾವು ಸದಾ ಸಿದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಸವದತ್ತಿ: ಜಿಲ್ಲೆಯ ಯಾವುದೇ ಗ್ರಾಮಗಳ ಜನರ ಸಮಸ್ಯೆಯಿದ್ದರೂ ನಿಮ್ಮ ನೆರವಿಗೆ ನಾವಿದ್ದೇವೆ. ಚುನಾವಣೆಯಲ್ಲಿ ಸೋತರೂ ಕೂಡ ನಿಮ್ಮ ಸಹಕಾರಕ್ಕೆ ನಾವು ಸದಾ ಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಮಾಡಮಗೇರಿ, ಯರಝರ್ವಿ, ಕಡಬಿ, ತಲ್ಲೂರ ಮತ್ತು ಯರಗಟ್ಟಿ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ವಿಚಾರ ಇತ್ತು. ಹೀಗಾಗಿ, ಇಂದು ಸವದತ್ತಿ ತಾಲೂಕಿನ 5 ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಬಾರಿ 5 ಗ್ರಾಮಗಳಿಗೆ ಭೇಟಿ ನೀಡಿ, ಜನರಿಗೆ ಧನ್ಯವಾದ ಸಲ್ಲಿಸಲಿದ್ದೇನೆ ಎಂದರು.

ಜನರು ತಮ್ಮ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನಮ್ಮನ್ನು ಭೇಟಿ ಮಾಡಬಹುದು. ಗೋಕಾಕ ಅಥವಾ ಬೆಳಗಾವಿಯಲ್ಲಿ ನಮ್ಮನ್ನು ಭೇಟಿಯಾಗಹುದು. ತಮ್ಮ ಗ್ರಾಮಗಳ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಿದ್ದರೇ, ನಿಮ್ಮೊಂದಿಗೆ ನಾನು ಕೂಡ ಬರುತ್ತೇನೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಸತೀಶ್ ಫೌಂಡೇಶನ್ ನಿಂದ ಸಮುದಾಯ ಭವನಗಳಿಗೆ ಕುರ್ಚಿಗಳ ವಿತರಣೆ:

ಸತೀಶ್ ಫೌಂಡೇಶನ್ ವತಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಗ್ರಾಮಗಳಲ್ಲಿರುವ ಸಮುದಾಯ ಭವನಗಳಿಗೆ ಕುರ್ಚಿ ಹಾಗೂ ಮೈಕ್ ಸೆಟ್ ವಿತರಿಸಲಾಗುವುದು. ಇದರಿಂದ ಖಾಸಗಿ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಚುನಾವಣೆ ಸೋತ ಮೇಲೆ ಮತ್ತೆ ಚುನಾವಣೆ ಸಂದರ್ಭದಲ್ಲೇ ಜನರ ಬಳಿ ಬರುವವರು ನಾವಲ್ಲ. ಗೆದ್ದರೂ, ಸೋತರೂ ನಾವು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಮುಂದಿನ ದಿನಗಳಲ್ಲಿ ಜನರ ಬೇಡಿಕೆಗಳು ಹಾಗೂ ನ್ಯಾಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದರು.

ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರಿಗೆ ಸತೀಶ ಜಾರಕಿಹೊಳಿ ಅವರು ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀರಿಸಿದರು. ಇದೇ ಸಂದರ್ಭದಲ್ಲಿ ಸತೀಶ ಅವರನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಸನ್ಮಾನಿಸಿ, ಅಭಿನಂದಿಸಿದರು.

ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಉಮೇಶ ಬಾಳಿ, ಸೌರಭ ಚೋಪ್ರಾ, ಗೊರಗುದ್ದಿಯ ವಿಠ್ಠಲ ಅಜ್ಜನವರು, ತಾಪಂ ಮಾಜಿ ಉಪಾಧ್ಯಕ್ಷ ಛಾಯಪ್ಪ ಹುಂಡೇಕಾರ, ಜಿಪಂ ಸದಸ್ಯ ಫಕೀರಪ್ಪ ಹದ್ದನ್ನವರ, ಡಿಸಿಸಿ ಬ್ಯಾಂಕ್ ನಿರ್ದೇಶಕ ರೇವಪ್ಪ ರೆಬ್ಬನ್ನವರ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಕುಂಟಿರಪ್ಪಗೋಳ, ಪ್ರಕಾಶ ಸುಣದೋಳಿ ಸೇರಿ ನೂರಾರು ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಚುನಾವಣೆಯಲ್ಲಿ ಸೋತರೂ ಜನರ ಸಹಕಾರಕ್ಕೆ ನಾವು ಸದಾ ಸಿದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button