Latest

ಅನವಾಲ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಿಎಂ ಬಿ.ಎಸ್.ವೈ ಒಲವು 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಬೀಳಗಿ ಮತಕ್ಷೇತ್ರದಲ್ಲಿ ೧ ಲಕ್ಷ ಏಕರೆ ಹೊಸ ನೀರಾವರಿ ಕ್ಷೇತ್ರ ಸೃಷ್ಟಿಸಲು ಮುಂದಾಗಿದ್ದಾರೆ.

೩ ತಾಲೂಕುಗಳಿಗೆ ವ್ಯಾಪಿಸಿದ ಬೀಳಗಿ ಮತಕ್ಷೇತ್ರದ ಮೂಲೆ -ಮೂಲೆಯನ್ನು ಹುಡುಕಿ ನೀರು ಹರಿಸಲು ಸಿದ್ಧವಾದಂತಿದೆ. ಇದರ ಫಲವಾಗಿ ಜಿ.ಆರ್.ಬಿ.ಸಿ ಅಚ್ಚುಕಟ್ಟು ಪ್ರದೇಶವೆಂದು ನೀರಾವರಿ ಇಲಾಖೆಯಲ್ಲಿ ನಮೂದಾಗಿದ್ದರೂ ನೀರಾವರಿ ಸೌಲಭ್ಯ ವಂಚಿತ ಜಮೀನುಗಳಿಗೆ ನೀರು ಹರಿಸಲು ಅನವಾಲ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಕಾರ್ಯಸಾಧ್ಯತಾ ವರದಿಯನ್ನು  ತಜ್ಞರಿಂದ ತಯಾರಿ ಮಾಡಿಸಿ ಮುರುಗೇಶ ನಿರಾಣಿ ಸರ್ಕಾರಕ್ಕೆ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೨೧-೨೨ನೇ ಸಾಲಿನ ಬಜೇಟ್‌ನಲ್ಲಿ ಅಳವಡಿಸಿಕೊಳ್ಳಲು ಆದೇಶಿಸಿದ್ದರು. ಈಗ ಸದರಿ ಕಾಮಗಾರಿ ಕುರಿತು ಮುರುಗೇಶ ನಿರಾಣಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಕರ್ನಾಟಕ ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ತೆಗೆದುಕೊಳ್ಳುವಂತೆ ಸೂಚಿಸಿರುವುದು ಈ ಭಾಗದ ರೈತರ ಮುಖದಲ್ಲಿ ಹರ್ಷ ತಂದಿದೆ.

ಏನಿದು ಅನವಾಲ ಏತ ನೀರಾವರಿ ಯೋಜನೆ?

ಘಟಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳು ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಗಳ ಜೀವನಾಡಿಗಳಾಗಿವೆ. ಘಟಪ್ರಭಾ ಬಲದಂಡೆ ಕಾಲುವೆ ಜಾಲದಿಂದ ೧,೬೯,೧೨೯ ಹೆಕ್ಟೇರ್ ಹಾಗೂ ಎಡದಂಡೆ ಕಾಲುವೆ ಜಾಲದಿಂದ ೧,೬೧,೮೮೦ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ೧೯೯.೦೩ ಕಿ. ಮೀ ಉದ್ದದ ಘಟಪ್ರಭಾ ಬಲದಂಡೆ ಕಾಲುವೆಯ ನಿರ್ಮಾಣ ೨೦೦೪ರಲ್ಲಿ ಪೂರ್ಣಗೊಂಡಿದೆ. ಕಾಲುವೆ ನಿರ್ಮಿಸಿ ೧೮ ವರ್ಷ ಗತಿಸಿದರೂ ಕಾಲುವೆಯ ೧೬೯.೦೦ ಕಿ.ಮೀವರೆಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದ್ದು, ಉಳಿದ ೩೦ ಕಿ.ಮಿ. ಭಾಗದ ಕಾಲುವೆ ಹಾಗೂ ಉಪಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾಗಲಕೋಟ ಜಿಲ್ಲೆಯ ಬಾಗಲಕೋಟ, ಬದಾಮಿ, ಮುಧೋಳ ತಾಲೂಕಿನ ೧೪,೫೨೫.೨೩ ಹೆಕ್ಟೇರ್ ಭೂಪ್ರದೇಶ ನೀರಾವರಿಯಿಂದ ವಂಚಿತವಾಗಿದೆ.

ಜಿ.ಆರ್.ಬಿ.ಸಿ ಅಚ್ಚುಕಟ್ಟು ಪ್ರದೇಶದ ನೀರಾವರಿ ವಂಚಿತ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವ ಅನಿವಾರ್ಯತೆ ಅರಿತು ಗಣ ಮತ್ತು ಭೂ ವಿಜ್ಞಾನ ಸಚಿವರು ಹಾಗೂ ಬೀಳಗಿ ಶಾಸಕರಾದ ಮುರುಗೇಶ ನಿರಾಣಿ ಯವರು ಬೆಂಗಳೂರಿನ ಪ್ರತಿಷ್ಠಿತ ಇ.ಐ. ಟೆಕ್ನೋಜೀಸ್‌ನ ನೀರಾವರಿ ತಜ್ಙ ಇಂಜಿನಿಯರ್‌ಗಳ ತಂಡವನ್ನು ಕರೆಸಿ ಪರ್ಯಾಯ ವಿಧಾನವನ್ನು ಕಂಡುಕೊಳ್ಳಲು ಸೂಚಿಸಿದ್ದರು.

ಹೀಗಾಗಿ ಸೂಳಿಕೇರಿ, ಕಗಲಗೊಂಬ, ಕಟಗೇರಿ, ಶಿರೂರ, ನೀಲನಗರ, ಕೆರಕಲಮಟ್ಟಿ ಗ್ರಾಮಗಳ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತು ಅನವಾಲ ಏತ ನೀರಾವರಿ ಯೋಜನೆ ಮೂಲಕ ೧೧೯.೦೦ ಕಿ.ಮೀ ಯಿಂದ ೧೯೯.೦೩ ವರೆಗೆ ಜಿ.ಆರ್.ಬಿ.ಸಿ. ಕಾಲುವೆಗೆ ಆಲಮಟ್ಟಿ ಹಿನ್ನೀರು ಉಪಯೋಗಿಸಿಕೊಂಡು ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ವಾರ್ಷಿಕ ೩.೧೩ ಟಿಎಂಸಿ ಅಡಿ ಆಲಮಟ್ಟಿ ಹಿನ್ನೀರನ್ನು ಬಳಸಿಕೊಂಡು ೧೪,೫೨೫.೨೩ ಹೆಕ್ಟೇರ್ ಭೂ ಪ್ರದೇಶಕ್ಕೆ ಸಂಪೂರ್ಣ ನೀರಾವರಿ ಕಲ್ಪಿಸುವ ೪೧೧ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ.

ಯೋಜನೆ ಅನುಷ್ಠಾನ ಹೇಗೆ?

ಆಲಮಟ್ಟಿ ಹಿನ್ನಿರು ಬಳಸಿಕೊಂಡು ಘಟಪ್ರಭಾ ನದಿ ಬಲದಂಡೆಯ ದೇವನಾಳ ಬಳಿ ಜಾಕವೆಲ್ ಕಂ. ಪಂಪಹೌಸ್ ನಿರ್ಮಿಸಿ ನೀರನ್ನು ಎತ್ತಿ ೨೮.೪೦ ಕಿ.ಮೀ. ಎಂ.ಎಸ್. ಪೈಪಲೈನ್ ಮೂಲಕ ೧೯.೨೦ ಕಿ. ಮೀ ದೂರದಲ್ಲಿರುವ ಬಲದಂಡೆ ಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ ಅಚ್ಚುಕಟ್ಟು ಪ್ರದೇಶಕ್ಕೆ ಈಗಾಗಲೇ ಇರುವ ಕಾಲುವೆ ಹಾಗೂ ಉಪ ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಬಹುದು.

ಎಲ್ಲೆಲ್ಲಿ ಉಪಯೋಗ?

ಈ ಯೋಜನೆಯಿಂದ ೧೧೯ ಕಿ.ಮೀ ನಂತರದ ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಕೆರಕಲಮಟ್ಟಿ, ಮುಚಖಂಡಿ, ಬಾಗಲಕೋಟ, ಮಲ್ಲಾಪೂರ, ಕಮತಗಿ, ಇಂಗಳಗಿ ವಿತರಣಾ ಕಾಲುವೆಗಳಿಗೂ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಇದರಿಂದ ಬದಾಮಿ, ಬಾಗಲಕೋಟ, ಮುಧೋಳ ತಾಲೂಕಿನ ಹೂಲಗೇರಿ, ಕಗಲಗೊಂಬ, ಸೂಳಿಕೇರಿ, ನೀರಲಕೇರಿ, ಶಿರೂರ, ಕಮತಗಿ, ಮಲ್ಲಾಪೂರ, ನೀಲನಗರ, ಇಂಗಳಗಿ, ಕೆರಕಲಮಟ್ಟಿ, ಗಂಗನಬೂದಿಹಾಳ, ಬಂದಕೇರಿ, ಜಲಗೇರಿ ತಾಂಡಾ, ಕಲಬಂದಕೇರಿ, ಮುಚಖಂಡಿ, ಬಾಗಲಕೋಟ ಸೇರಿದಂತೆ ೧೭ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಈ ಯೋಜನೆಗಾಗಿ ಜಿಲ್ಲೆಯ ಪ್ರಮುಖ ರಾಜಕಾರಣ ಗಳು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕಳೆದ ಬಜೇಟ್‌ನಲ್ಲಿಯೇ ಪರಿಗಣಿಸುವಂತೆ ಸಚಿವ ಹಾಗೂ ಬೀಳಗಿ ಶಾಸಕ ಮುರುಗೇಶ ನಿರಾಣಿ , ಮಾಜಿ ಸಿ.ಎಂ. ಹಾಗೂ ಬದಾಮಿ ಶಾಸಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ, ಸಂಸದರಾದ ಪಿ.ಸಿ. ಗದ್ದಿಗೌಡರ, ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಕ್ಕರೆ ಕಾರ್ಖಾನೆ ಸುಧಾರಣೆಗೆ ಅಮೂಲಾಗ್ರ ಬದಲಾವಣೆ; ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button