Kannada NewsLatest

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜನರು ಈ ಬಾರಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಜನಸಾಮಾನ್ಯರು ಬೆಲೆ ಏರಿಕೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು:

ಬೆಲೆ ಏರಿಕೆ ಜನರಿಗೆ ಈಗಾಗಲೇ ಹೊರೆಯಾಗಿದೆ. ಮತ್ತೆ ಎಲ್ ಪಿಜಿ ಸಿಲಿಂಡರ್ ದರ 25 ರೂ. ಹೆಚ್ಚಿಸಲಾಗಿದೆ. ಇದು ನಿಲ್ಲುವ ಲಕ್ಷಣಗಳಿಲ್ಲ. ಅವರಿಗೆ ಸಮಾಧಾನ ಆಗುವವರೆಗೂ ಬೆಲೆ ಏರಿಕೆ ಮಾಡುತ್ತಲೇ ಹೋಗುತ್ತಾರೆ. ಕೇಂದ್ರ ಸರ್ಕಾರದವರು ಹಿಡನ್ ಅಜೆಂಡಾ ಇಟ್ಟುಕೊಂಡು ಬೆಲೆ ಏರಿಕೆ ಮಾಡುತ್ತಿದ್ದಾರೆ. ಜನಸಾಮಾನ್ಯರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ವತಿಯಿಂದ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮಾಡುತ್ತಲೇ ಇದ್ದೇವೆ. ಆದರೆ, ಜನಸಾಮಾನ್ಯರು ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇವಲ ವಿರೋಧ ಪಕ್ಷದವರು ಪ್ರತಿಭಟನೆ ಮಾಡಿದರೇ, ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುತ್ತಾರೆ. ಹೀಗಾಗಿ, ಜನರೇ ಈ ಬಗ್ಗೆ ಹೋರಾಟ ಮಾಡಬೇಕು. ಜನರು ಪ್ರತಿಭಟನೆ ಮಾಡಿದರೇ ಮಾತ್ರ ಸರ್ಕಾರ ಹೆದರುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಬೇಕು:

ಗೋಕಾಕ ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಗರದಲ್ಲಿ 10 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅದರಲ್ಲಿ ಒಂದು ಕ್ಯಾಮೆರಾ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿದರೇ ಕಳ್ಳರನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಜೊತೆಗೆ ಕಳ್ಳತನ ಮಾಡುವವರಿಗೂ ಭಯವಿರುತ್ತದೆ. ಹೀಗಾಗಿ, ಈ ಬಗ್ಗೆ ಡಿವೈಎಸ್ಪಿ ಗೆ ಇಂದು ಪತ್ರ ಬರೆಯುತ್ತಿದ್ದೇನೆ. ನಗರದಲ್ಲಿ ಹೆಚ್ಚು ಸಿಸಿ ಕ್ಯಾಮೆರಾ ಅಳವಿಡಿಸಲು ತಿಳಿಸುತ್ತೇನೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. 5 ಲಕ್ಷ ಜನಸಂಖ್ಯೆಗೆ 30-40 ಜನ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ. ವೈಜ್ಞಾನಿಕವಾಗಿ ಈ ಕ್ರಮ ಸರಿಯಲ್ಲ. ಹೆಚ್ಚಿನ ಸಿಬ್ಬಂದಿ ನಿಯೋಜನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ತಾಂತ್ರಿಕ ಸುಧಾರಣೆಯೇ ಇದಕ್ಕೆ ಪರಿಹಾರವಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಬೆಳಗಾವಿಯಲ್ಲಿ ಈವರೆಗಿನ ಮತದಾನದ ವಿವರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button