ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 100 ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಬೇಕೆನ್ನುವ ಹೈಕಮಾಂಡ್ ಸೂಚನೆ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟು ಹಾಕಿದೆ.
ಜೊತೆಗೆ ಹಲವಾರು ಘಟಾನುಘಟಿಗಳಲ್ಲಿ ನಡುಕ ಹುಟ್ಟಿಸಿದೆ.
ಈ ಬಾರಿ ಟಾರ್ಗೆಟ್ 150 ಇಟ್ಟುಕೊಂಡಿರುವ ಬಿಜೆಪಿ, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಮುಂದಿನ ಬಾರಿ ಆಪರೇಶನ್ ಕಮಲದ ಅನಿವಾರ್ಯತೆ ಸೃಷ್ಟಿಯಾಗಬಾರದು. ಜೊತೆಗೆ ಕ್ಲೀನ್ ಇಮೇಜ್ ತರುವ ಮೂಲಕ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೇರಬೇಕು ಎನ್ನುವುದು ಹೈಕಮಾಂಡ್ ಗುರಿ.
ಈ ಹಿನ್ನೆಲೆಯಲ್ಲಿ, 224 ಕ್ಷೇತ್ರಗಳ ಪೈಕಿ ಕನಿಷ್ಠ 100 ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಬೇಕು. ಹಿನ್ನೆಲೆ, ಸಾಧನೆ ಮತ್ತು ವಯಸ್ಸು ಈ ಮೂರನ್ನೂ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹಾಲಿ ಶಾಸಕರಲ್ಲಿ ಕೆಲವರನ್ನು ಕೈಬಿಡುವ ಜೊತೆಗೆ ಕಳೆದ ಬಾರಿ ಸೋತಿರುವವರನ್ನೂ ಬಿಟ್ಟು ಹೊಸಬರನ್ನು ಆಯ್ಕೆ ಮಾಡಬೇಕು. ಸಾಧ್ಯವಾದಷ್ಟು ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಯುವಕರನ್ನು ಕಣಕ್ಕಿಳಿಸಬೇಕು ಎನ್ನುವ ಸೂಚನೆಯನ್ನು ಹೈಕಮಾಂಡ್ ನೀಡಿದೆ.
ಪಕ್ಷಕ್ಕೆ ಬದ್ಧತೆ ಇಲ್ಲದಿರುವವರನ್ನು ಹಾಗೂ ಯಾವುದೇ ಸಾಧನೆ ಇಲ್ಲದೆ ವಂಶಪಾರಂಪರ್ಯದಿಂದ ಬಂದಿರುವವರನ್ನು ಹೊರಗಿಡಬೇಕು ಎಂದು ಸೂಚಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ನೀತಿ ಅನ್ವಯಿಸಲು ನಿರ್ಧರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಐವರು ಸೇರಿದಂತೆ ರಾಜ್ಯದಲ್ಲಿ ಕನಿಷ್ಠ 25 ಹಾಲಿ ಶಾಸಕರನ್ನು ಈ ಬಾರಿ ಹೊರಗಿಡಲು ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ. ಜೊತೆಗೆ ಕಳೆದ ಬಾರಿ ಸೋತಿರುವ ಶೇ.90ರಷ್ಟು ಜನರನ್ನು ಕೈಬಿಡಲು ನಿರ್ಧರಿಸಲಾಗಿದೆ. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವವರನ್ನುಸಹ ಕೈಬಿಡಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೆ ಎರಡು ಹಂತದ ಸಮೀಕ್ಷೆಯನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಒಂದು ರಾಜ್ಯ ತಂಡ ಮತ್ತೊಂದು ಕೇಂದ್ರ ತಂಡದಿಂದ ಸಮೀಕ್ಷೆ ನಡೆಯುತ್ತಿದೆ. ಜೊತೆಗೆ ಇಂಟಲಿಜನ್ಸ್ ರಿಪೋರ್ಟ್ ಕೂಡ ಪಡೆಯಲಾಗುತ್ತಿದೆ.
ಪಕ್ಷ ಮುಂದಿನ ದಿನಗಳಲ್ಲಿ ಸ್ವಂತ ಬಹುಮತದ ಮೇಲೆಯೇ ಅಧಿಕಾರಕ್ಕೆ ಬರಬೇಕು. ಆಪರೇಶನ್ ಮೂಲಕ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ಬಂದರೆ ಪಕ್ಷಹೆಚ್ಚು ದಿನ ಬದುಕಲಾರದು. ಜೊತೆಗೆ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಲಾರದು. ಹಾಗಾಗಿ ಪಕ್ಷಕಕ್ಕೆ ಕ್ಲೀನ್ ಇಮೇಜ್ ತರುವುದು ಮುಂದಿನ ಚುನಾವಣೆಯಲ್ಲಿ ಮೊದಲ ಆದ್ಯತೆಯಾಗಲಿದೆ ಎಂದು ಪಕ್ಷದ ಮೂಲಗಳು ಪ್ರಗತಿವಾಹಿನಿ ಗೆ ತಿಳಿಸಿವೆ.
ಯಡಿಯೂರಪ್ಪ ಭೇಟಿಯಾದ ಬಿ.ಎಲ್.ಸಂತೋಷ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ