ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ಶಾಲೆಗಳು ಆರಂಭವಾಗುತ್ತಾ? – ಡಿಸಿ, ಡಿಡಿಪಿಐ ಏನಂದ್ರು? – ಈ ಸುದ್ದಿ ಓದಿ
ಪ್ರಗತಿವಾಹಿನಿಗೆ ಡಿಸಿ, ಡಿಡಿಪಿಐ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಲೆಗಳಿಗೆ ಜನೆವರಿ 11ರಿಂದ 18ರ ವರೆಗೆ ರಜೆ ಘೋಷಣೆ ಮಾಡಲಾಗಿತ್ತು. ನಂತರ ಅದನ್ನು ಪರಿಷ್ಕರಿಸಿ ಜನೆವರಿ 17ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದರು.
ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಶಾಲೆಗಳಿಗೆ ರಜೆ ನೀಡುವ ಅಧಿಕಾರಿವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಸರಕಾರ ಈ ಹಿಂದೆ ಆದೇಶ ಹೊರಡಿಸಿತ್ತು.
ನಂತರದಲ್ಲಿ, ಶಾಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಶೇ.10ಕ್ಕಿಂತ ಹೆಚ್ಚಾದರೆ ಆ ಶಾಲೆಗೆ ಮಾತ್ರ ರಜೆ ಘೋಷಿಸಿದರೆ ಸಾಕು, ಇಡೀ ಜಿಲ್ಲೆ ಅಥವಾ ತಾಲೂಕಿಗೆ ರಜೆ ಘೋಷಿಸುವ ಅಗತ್ಯವಿಲ್ಲ ಎಂದು ರಾಜ್ಯದ ಮುಖ್ಯಕಾರ್ಯದರ್ಶಿಗಳು ವೀಡಿಯೋ ಕಾನ್ಫರೆನ್ಸ್ ನಲ್ಲಿ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮೊದಲಿನ ಆದೇಶವನ್ನು ಪರಿಷ್ಕರಿಸಿ ಮರು ಆದೇಶ ಹೊರಡಿಸಿದ್ದರು. ಅದರ ಪ್ರಕಾರ ಸೋಮವಾರ ಶಾಲೆಗಳು ಆರಂಭವಾಗಬೇಕಿದೆ.
ಈ ಕುರಿತು ಡಿಡಿಪಿಐ ಬಸವರಾಜ ನಾಲತವಾಡ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ಶಾಲೆಗಳ ರಜೆ ವಿಷಯದಲ್ಲಿ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರದಿಂದಲೇ ಶಾಲೆಗಳು ಆರಂಭವಾಗಲಿವೆ. ಮುಂದುವರಿಸುವ ಯಾವುದೇ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 75 ಮಕ್ಕಳಿಗೆ ಮತ್ತು 12 ಶಿಕ್ಷಕರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ಶಾಲೆಗಳು ಸೋಮವಾರದಿಂದ ಆರಂಭವಾಗಲಿವೆ ಎಂದು ತಿಳಿಸಿದರು.
ಶಾಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಶೇ.10ಕ್ಕಿಂತ ಹೆಚ್ಚಾದಲ್ಲಿ ಆ ಶಾಲೆಗೆ ಮಾತ್ರ ರಜೆ ನೀಡಲಾಗುವುದು. ಬೇರೆ ಶಾಲೆಗಳು ಎಂದಿನಂತೆ ನಡೆಯಲಿವೆ. ಪೂರ್ಣ ತಾಲೂಕು ಅಥವಾ ಪೂರ್ಣ ಜಿಲ್ಲೆಗೆ ಶಾಲೆ ರಜೆ ಘೋಷಣೆ ಮಾಡುವುದಿಲ್ಲ. ಈ ಕುರಿತು ರಾಜ್ಯ ಸರಕಾರದ ಆದೇಶವಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ಸೈನಿಕ ಶಾಲೆ, ಅಥಣಿಯ ಯಂಕಂಚಿ ಶಾಲೆಗಳಲ್ಲಿ ಮತ್ತು ನಿಪ್ಪಾಣಿಯ ಕೆಎಲ್ಇ ಕಾಲೇಜಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪತ್ತೆಯಾಗಿದೆ. ಆ ಶಾಲೆಗಳನ್ನು ಸಧ್ಯಕ್ಕೆ ತೆರೆಯುವುದಿಲ್ಲ. ಬೇರೆಲ್ಲ ಶಾಲೆಗಳು ಸೋಮವಾರ ಆರಂಭವಾಗಲಿವೆ ಎಂದು ಅವರು ತಿಳಿಸಿದರು.
ಸೋಮವಾರದಿಂದಲೇ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳು ಪುನಾರಂಭವಾಗಲಿವೆ.
ಬೆಳಗಾವಿಯಲ್ಲಿ ಮತ್ತೆ ಕೊರೋನಾ ಅಟ್ಟಹಾಸ; ಅಥಣಿಯಲ್ಲೂ ಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ