ಪ್ರಗತಿವಾಹಿನಿ ಸುದ್ದಿ ಔರಂಗಾಬಾದ್: ರೈತನೊಬ್ಬನ ಬ್ಯಾಂಕ್ ಖಾತೆಗೆ ಆಕಸ್ಮಿಕವಾಗಿ ೧೫ ಲಕ್ಷ ರೂ. ಹಣ ಜಮಾವಣೆಯಾಗಿದ್ದು, ಆತ ಅದನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿದ್ದೆಂದು ತಿಳಿದು ಬೇಸ್ತು ಬಿದ್ದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ.
ಈ ಪ್ರಕರಣ ಮೇಲ್ನೋಟಕ್ಕೆ ಹಾಸ್ಯವೆನಿಸಿದರೂ ಬಡ ರೈತನ ಮುಗ್ಧತೆಗೆ ಹಲವರು ಕನಿಕರ ವ್ಯಕ್ತಪಡಿಸಿದ್ದಾರೆ.
ದಂಗಾದ ರೈತ
ಔರಂಗಾಬಾದ್‌ನ ಪೈಠಾಣ್ ಎಂಬ ಊರಿನ ರೈತ ಜ್ಞಾನೇಶ್ವರ ಓಟೆ ಎಂಬುವವರ ಜನ್‌ಧನ್ ಖಾತೆಗೆ ಅಚಾನಕ್ಕಾಗಿ ೧೫ ಲಕ್ಷ ರೂ. ಜಮಾ ಆಗಿತ್ತು. ವಾಸ್ತವದಲ್ಲಿ ಅಲ್ಲಿನ ಗ್ರಾಮ ಪಂಚಾಯ್ತಿಯ ಖಾತೆಗೆ ಯೋಜನೆಯೊಂದರ ಸಲುವಾಗಿ ಜಮಾ ಮಾಡಬೇಕಿದ್ದ ಹಣ ತಪ್ಪಾಗಿ ರೈತನ ಖಾತೆಗೆ ಬಿದ್ದಿತ್ತು.
ಒಮ್ಮೆ ತನ್ನ ಖಾತೆಗೆ ಏಕಾಏಕಿ ೧೫ ಲಕ್ಷ ರೂ. ಜಮಾ ಆಗಿದ್ದು ನೋಡಿ ರೈತ ಜ್ಞಾನೇಶ್ವರ ಓಟೆ ದಂಗಾಗಿದ್ದ. ಆದರೆ ನರೇಂದ್ರ ಮೋದಿ ಈ ಮೊದಲೊಮ್ಮೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೇಶದಲ್ಲಿ ಪ್ರತಿ ಭಾರತೀಯನ ಖಾತೆಗೆ ೧೫ ಲಕ್ಷ ಕೊಡುತ್ತೇನೆ ಎಂದಿದ್ದು ಆತನಿಗೆ ನೆನಪಾಗಿದೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಅಷ್ಟೊಂದು ಅಗಾಧ ಪ್ರಮಾಣದಲ್ಲಿ ಕಪ್ಪು ಹಣ ಇದೆ ಎಂಬುದನ್ನು ಸಾಂಕೇತಿಕವಾಗಿ ಆ ರೀತಿ ಹೇಳಿದ್ದರೂ ರೈತ ಜ್ಞಾನೇಶ್ವರ ಅದನ್ನು ಅಕ್ಷರಶಃ ನಂಬಿದ್ದ. ಹಾಗಾಗಿ ತನ್ನ ಖಾತೆಗೆ ಬಂದ ೧೫ ಲಕ್ಷ ರೂ. ಪ್ರಧಾನಿ ಮೋದಿಯೇ ಹಾಕಿದ್ದು ಎಂದು ಆತ ತಿಳಿದಿದ್ದನಂತೆ !
ನಂಬಲಿಕ್ಕೂ ಕಾರಣವಿತ್ತು
ಜ್ಞಾನೇಶ್ವರ ಓಟೆ, ತನ್ನ ಖಾತೆಗೆ ಬಿದ್ದ ಹಣ ಮೋದಿಯೇ ಹಾಕಿರಬೇಕು ಎಂದು ನಂಬಲಿಕ್ಕೂ ಕಾರಣವಿತ್ತು. ಹಣ ಬಂದಾಗ ಕೆಲ ಸಮಯ ಅಚ್ಚರಿಗೊಂಡರೂ, ಆತ ಅದನ್ನು ಖಾತೆಯಿಂದ ತೆಗೆದಿರಲಿಲ್ಲ. ತಿಂಗಳಾದರೂ ಅದರ ಬಗ್ಗೆ ಯಾರೂ ಕೇಳದಿದ್ದಾಗ ಬ್ಯಾಂಕಿನವರಲ್ಲಿ ವಿಚಾರಿಸಿದ್ದಾನೆ. ಆದರೆ ಬ್ಯಾಂಕಿನರಿಂದಲೂ ಸಮರ್ಪಕ ಉತ್ತರ ಸಿಗದಿದ್ದರಿಂದ ಈ ಹಣವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಹಾಕಿದ್ದಿರಬೇಕು ಎಂದು ತಿಳಿದಿದ್ದಾಗಿ ರೈತ ಜ್ಞಾನೇಶ್ವರ ಹೇಳಿಕೊಂಡಿದ್ದಾರೆ.
ಹಾಗಾಗಿ ಆ ಹಣದಿಂದ ಹೊಸ ಮನೆಯೊಂದನ್ನು ಕಟ್ಟಿಸಿದ್ದಾನೆ. ಶೇ.80ರಷ್ಟು ಹಣ ಖರ್ಚು ಮಾಡಿದ್ದಾನೆ.
ಪರಿಶೀಲನೆಯ ಬಳಿಕ ಅದು ಗ್ರಾಮ ಪಂಚಾಯ್ತಿಯ ಖಾತೆಗೆ ಸೇರಬೇಕಿರುವ ಹಣ ಎಂದು ತಿಳಿದುಬಂದಿದ್ದು, ಹಣವನ್ನು ಜ್ಞಾನೇಶ್ವರ ಅವರಿಂದ ಪಡೆದು ಗ್ರಾಮ ಪಂಚಾಯ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ ಕುರಿತು ವಿಜ್ಞಾನಿಗಳ ಎಚ್ಚರಿಕೆ, ಬೆಚ್ಚಿ ಬಿದ್ದ ಜಗತ್ತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ