ಅರಬ್ಬೀ ಸಮುದ್ರದಲ್ಲಿ ನೇವಿ-ಎನ್‌ಸಿಬಿ ಜಂಟಿ ಕಾರ್ಯಾಚರಣೆ
ಪ್ರಗತಿ ವಾಹಿನಿ ಸುದ್ದಿ ಮುಂಬೈ – ಅರಬ್ಬೀ ಸಮುದ್ರದ ಆಳ ಸಾಗರದಲ್ಲಿ ನಡೆದ ಕಾಯಾಚರಣೆಯೊಂದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿಲ್ಲಿ ನೂರಿನ್ನೂರು ಗ್ರಾಂ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದನ್ನು ಕೇಳಿದ್ದ ಜನ, ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ನ ಪ್ರಮಾಣ ನೋಡಿ ದಿಗ್ಭ್ರಮೆಗೊಂಡಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಭಾರತದ ಕಡೆಗೆ ಬರುತ್ತಿದ್ದ ಹಡಗೊಂದನ್ನು ವಶಕ್ಕೆ ಪಡೆದ ನೇವಿ ಮತ್ತು ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ) ಅಧಿಕಾರಿಗಳು ಪರಿಶೀಲಿಸಿ ನೋಡಿದಾಗ ಬರೋಬ್ಬರಿ ೮೦೦ ಕೆಜಿ ಡ್ರಗ್ಸ್ ತುಂಬಿ ತರಲಾಗುತ್ತಿದ್ದು ಪತ್ತೆಯಾಗಿದೆ. ಈ ಡ್ರಗ್ಸ್‌ನ ಮೊತ್ತ ೨೦೦೦ ಕೋಟಿ ರೂ. ಮೌಲ್ಯದ್ದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗಾಧ ಪ್ರಮಾಣದ ಡ್ರಗ್ಸ್‌ನ ರಾಶಿ ಕಂಡು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳೇ ಹೌಹಾರಿದ್ದಾರೆ.
ಮುಂಬೈ ಅಥವಾ ಗುಜರಾತ್
ಎನ್‌ಸಿಬಿ ವ್ಯಾಪಕ ಗುಪ್ತಚರ ಜಾಲವನ್ನು ಹೊಂದಿದೆ. ಶನಿವಾರ ಎನ್‌ಸಿಬಿ ಅಧಿಕಾರಿಗಳಿಗೆ, ೨ ಹಡಗುಗಳಲ್ಲಿ ಡ್ರಗ್ಸ್ ತರಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಆಳ ಸಮುದ್ರದಲ್ಲಿನ ಕಾರ್ಯಾಚರಣೆಯಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ನೌಕಾಸೇನೆಯ ಸಹಕಾರ ಪಡೆಯಲಾಗಿತ್ತು. ಎನ್‌ಸಿಬಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಸಂಜಯ್‌ಕುಮಾರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮತ್ತು ಇದೇ ಮೊದಲ ಬಾರಿಗೆ ನೌಕಾಸೇನೆಯೊಂದಿಗೆ ಎನ್‌ಸಿಬಿ ಜಂಟಿ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆಯಲ್ಲಿ ಒಟ್ಟು ೫೨೫ ಕೆಜಿ ಹಶಿಶ್ ಮತ್ತು ೨೩೪ ಕೆಜಿ ಕ್ರಿಸ್ಟಲ್ ಮೆಥಾಂಪಟಮೈನ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಆದರೆ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಹಡಗಿನಲ್ಲಿದ್ದ ಆರೋಪಿಗಳು ಪಕ್ಕದಲ್ಲಿದ್ದ ಮತ್ತೊಂದು ಬೋಟ್‌ಗೆ ಹಾರಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿರುವ ಎನ್‌ಸಿಬಿಯ ಡೈರೆಕ್ಟರ್ ಜನರಲ್ ಎಸ್. ಎನ್. ಪ್ರಧಾನ್, ಈ ರೀತಿಯ ಬೃಹತ್ ಕಾರ್ಯಾಚರಣೆ ಎನ್‌ಸಿಬಿಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದಿದ್ದಾರೆ. ಡ್ರಗ್ಸ್ ಅನ್ನು ಮುಂಬೈ ಅಥವಾ ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದ್ದ ಬಗ್ಗೆ ಅನುಮಾನವಿದೆ. ತನಿಖೆಯ ಬಳಿಕ ಇದರಲ್ಲಿ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
https://pragati.taskdun.com/latest/belagavidcib-policedrug-pedlore-ashpak-mulla-arrest/
https://pragati.taskdun.com/latest/drugs-case5-students-arrestedmangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ